ಕೄಷಿ

Monday, November 16, 2009

ಕಾಡಿನ ಹುಚ್ಚು

ಒಮ್ಮೊಮ್ಮೆ ಹಾಗೇ ಅನ್ನಿಸಿದ್ದಿದೆ.
ಹುಚ್ಚು ಸ್ವಲ್ಪ ಹೆಚ್ಚಾಯಿತೇನೋ ಅಂತ!
ಎಲ್ಲರೂ ಕಂಪ್ಯೂಟರ್, ಸಾಫ್ಟವೇರ್ ಅಂತೆಲ್ಲ ಮುಗಿ ಬೀಳ್ತಾ ಇದ್ದ ಕಾಲದಲ್ಲಿ, ಅನಾಯಾಸವಾಗಿ ಸಿಕ್ಕ ಅದೇ ಕೆಲಸವನ್ನು ಬಿಟ್ಟು "ಕಾಡಿಗೆ ಹೋಗ್ತೇನೆ" ಅಂದಾಗ ಕರೆದು ಕುಡ್ರಿಸಿಕೊಂಡು ಬುದ್ಧಿ ಹೇಳಿದ ಗೆಳೆಯರ ನೆನಪು ಇನ್ನೂ ಕಣ್ಣ ಮುಂದಿದೆ.

ಕಾಡು, ವನ್ಯಜೀವಿ ಅದ್ಯಯನ, ಅರಣ್ಯ ಉತ್ಪನ್ನಗಳು, ಪಶ್ಚಿಮ ಘಟ್ಟಗಳು
ಅಂತೆಲ್ಲ ಹೇಳ್ತಾ, ಜಮೀನು ಖರೀದಿಸಿ,
ಕೃಷಿ ಮಾಡ್ತಾ ಇದ್ದು ಬಿಡಬೇಕೆಂದು ಕೊಂಡು,
ಖರೀದಿಸಿದ ಹೊಸ ಜಮೀನಿನಲ್ಲೇ ಒಂದು ಮನೆ ಕಟ್ಟಿಸಿ ಉಳಿಯುತ್ತಿದ್ದ ಹಾಗೆ,
ಇದ್ದಕ್ಕಿದ್ದಂತೆ, ಈಗ ಜರ್ಮನಿಗೆ ಬಂದು ಸೇರಿದ್ದೇನೆ.

ಬರ್ಲಿನ್ ಸಮೀಪದ ಗ್ರೀಪ್ಸ್ ವಾಲ್ಡ್ ವಿಶ್ವವಿದ್ಯಾಲಯದಲ್ಲಿ
ಮತ್ತೆ ಪಕ್ಕಾ ವಿದ್ಯಾರ್ಥಿಯಾಗುತ್ತಿದ್ದೇನೆ.
"ಕಾಡಿನ ಮಧ್ಯನೇ ಹುಟ್ಟಿ ಬೆಳೆದರೂ ಕಾಡಿನ ಹುಚ್ಚು ಯಾಕನೋ?"
ಅಂತ ಆಯಿ ಅಗಾಗ ಕೇಳುವ ಪ್ರಶ್ನೆಗೆ ಉತ್ತರವಂತೂ ನನ್ನಲ್ಲಿ ಇಲ್ಲ.

ಕಾಡು ನನ್ನ ಪಾಲಿನ ಹುಚ್ಚಂತೂ ಹೌದು.
ಅದೇ ಈ ವರೆಗೆ ನೆದರ್ ಲ್ಯಾಂಡ್ಸ್, ನೇಪಾಳ, ಫಿಲಿಪ್ಪನ್ಸ್, ಥೈಲ್ಯಾಂಡ್, ಮತ್ತೆ ಈಗ ಜರ್ಮನಿಗೆ ಕರೆದು ತಂದದ್ದು.

ಕ್ಷಮಿಸಿ ಬರೆಯುತ್ತೇನೆ ಅಂತ ಹೇಳಿದವನಿಗೆ ಈ ಬದಲಾವಣೆ ಕಾರಣದಿಂದ,
ಅಥವಾ ಹಳ್ಳಿಯ ಸೀಮಿತ ಅಂತರ್ಜಾಲ ಸೌಲಭ್ಯದಿಂದ ಬರೆಯಲಾಗಲಿಲ್ಲ
ಅಂತ ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ.
ಎಲ್ಲಕ್ಕೂ ಆಲಸ್ಯವೇ ಕಾರಣ ಅಂತ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು.
ಈಗಾದರೂ ಕಾರಣ ಹೇಳದೇ ಬರೆಯುವ ಪ್ರಯತ್ನ ಮಾಡಲೇ ಬೇಕು.