ಕೄಷಿ

Sunday, March 28, 2010

ಜರ್ಮನಿಯ ಹಳ್ಳಿಯೊಂದರಲ್ಲಿ ಮೂರು ದಿನ

ಖಂಡಿತವಾಗಿಯೂ ಇಂಥದ್ದೊಂದು ಹಳ್ಳಿ ಜರ್ಮನಿಯಲ್ಲಿ ಇರಬಹುದು ಎಂದು ನಾನು ಊಹಿಸಿರಲಿಲ್ಲ.


ಎಂಟೋ ಹತ್ತೋ ಮನೆಗಳು ಇರುವ ಪುಟ್ಟ ಊರು.

ನಮ್ಮ ವಾಹನ ಕಂಡ ತಕ್ಶಣ ಓಡಿ ಬಂದ ಹುಡುಗರ ಗುಂಪು;
ಕಿಟಕಿಯ ಅಂಚಿನಲ್ಲಿ ಕದ್ದು ನೋಡುವ ಮುಖಗಳು;

ಕ್ಯಾಮರಾ ತೆಗೆದಾಗ ಮಾಯ!.


ಥೇಟ್ ನಮ್ಮ ಜೋಯಿಡಾದ ಹಳ್ಳಿಗಳ ಅನುಭವವಾಗಿ
ತ್ತು.

ನಾನು ನೋಡಲು ಹೋಗಿದ್ದು "ಬ್ಲೂಮಬರ್ಗರವಾಲ್ಡ" ಎನ್ನುವ ಅರಣ್ಯ
ಪ್ರದೇಶವನ್ನು. ಪಕ್ಕದ 'ವಾರ್ಟಿನ್' ಹಳ್ಳಿಯಲ್ಲಿ ನಮ್ಮ ವಾಸ.

ಇಲ್ಲಿಂದ ತುಸು ದೂರದ 'ಕಾರ್ಲ್ಸ ಬರ್ಗ' ಎನ್ನುವ ಈ ಹಳ್ಳಿಯಲ್ಲಿ ವಾಹನ ನಿಲ್ಲಿಸಿ, ನಡೆದು ಹೋಗಬೇಕಿತ್ತು.

ಪೋಲಂಡಿನ ಗಡಿಯಂಚಿನಲ್ಲಿರುವ ಈ ಹಳ್ಳಿಯಲ್ಲಿ ಸುತ್ತಾಡುವಾಗ ನಮ್ಮ ಅರೆ ಮಲೆನಾಡಿನ ಭಾಗದಲ್ಲಿ ಮಳೆಗಾಲದ ನಂತರ ಸುತ್ತಾಡಿದ ಅನುಭವವಾಗುತ್ತದೆ.

ಕಣ್ಣಿಗೆ ಕಾಣಿಸುವಷ್ಟು ದೂರ ಹಸಿರು ಬಯಲುಗಳು; ಟ್ರ್ಯಾಕ್ಟರುಗಳು.

ಆದರೆ ಜನ ಮಾತ್ರ ಕಡಿಮೆ.

ಲ್ಯಾಂಡಸ್ಕೇಪಿನ ಭಾಗವೇನೋ ಎನ್ನಿಸುವ ಗಾಳಿ ಗಿರಣಿಗಳು ಎಲ್ಲೆಡೆ ಕಾಣಿಸುತ್ತವೆ!




ಕಾಂಪೋಷ್ಟ ತಯಾರಿ. ಪ್ಲಾಸ್ಟಿಕ ಹಾಳೆಗಳನ್ನು ಮುಚ್ಚಿ ಹಳೆ ಟೈರ ಗಳ ಹೊದಿಕೆ.


ಛಳಿಗಾಲ ಈಗಷ್ಟೇ ಮುಗಿದದ್ದರಿಂದ ಹೊಲದ ತಯಾರಿ ಜೋರಾಗಿಯೇ ನಡೆದಿದೆ.

ಬೆಳೆ ಅಂದರೆ ಹೆಚ್ಚಿನ ಭಾಗ ಹುಲ್ಲು!

ಅಲ್ಲಲ್ಲಿ ಕಳೆದ ವರ್ಷ ಜೋಳ ಬೆಳೆದ ಕುರುಹುಗಳು ಕಾಣುತ್ತದೆ.

ನಾನು ಈ ವರೆಗೆ ನೋಡಿದ ಎಲ್ಲ ಕೊಟ್ಟಿಗೆಗಳೂ ಪ್ಯಾಕ್ಟರಿಯನ್ನ ನೆನಪಿಸುತ್ತಿದ್ದವು.

ಅವು ಇರುವ ಅವಸ್ಥೆಯನ್ನು ನೋಡಿದರೆ,

"ಹುಲ್ಲು ಹಾಕಿದರೆ, ಹಾಲು ತಯಾರಿಸುವ ಯಂತ್ರಗಳ" ಹಾಗೆ ಕಾಣಿಸುತ್ತದ್ದವು.

ಮೊದಲ ಬಾರಿ ಬಯಲಲ್ಲಿ ಆರಾಮಾಗಿ ಸುತ್ತಾಡುವ ದನಗಳನ್ನು ನೋಡಿದ್ದೆ.

ನಮ್ಮೊಡನಿದ್ದ ಪ್ರೊಫೆಸರ ಟೀಮೊ, ದನಗಳ ಹಾಗೆ ಕೂಗಿದರೆ,

ಎಲ್ಲ ದನಗಳೂ ನಮ್ಮ ಸುತ್ತಮುತ್ತ!

ತಿರುಗಿ ಬೇಲಿಯೊಳಗೆ ಕಳಿಸುವವರೆಗೆ ನಾವೂ ದನ ಕಾಯುವವರೇ!

ಒಟ್ಟೂ ಒಂಭತ್ತು ದೇಶದವರಿರುವ ನಮ್ಮ ತಂಡ ಕೆಲಹೊತ್ತು

"ಅಂತರಾಷ್ಟ್ರೀಯ ದನ ಕಾಯುವವರ ತಂಡ" ವಾಗಿತ್ತು.


ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಬೆಳೆ ಬೆಳೆಯಲು ಸಾಧ್ಯ.

ಉಳಿದೆಲ್ಲ ಸಮಯ ಛಳಿ; ಹಿಮ ತುಂಬಿರುವುದೇ ಹೆಚ್ಚು.

ಹಾಗಾಗಿ ವರ್ಷಕ್ಕೆ ಬೇಕಾಗುವಷ್ಟು ಹುಲ್ಲು ಬೇಸಿಗೆಯಲ್ಲೇ ಬೆಳೆದಿಟ್ಟುಕೊಳ್ಳಬೇಕು .

ಹಿಮದಲ್ಲಿ ಹಾಳಾಗದಂತೆ ಪ್ಲಾಸ್ಟಿಕ ಹೊದಿಕೆ ಹಾಕಿದ, ರೋಲರಿನ ಹಾಗೆ ಕಾಣುವ ಹುಲ್ಲಿನ ಪಿಂಡಿಗಳು ಅಲ್ಲಲ್ಲಿ ಸಾಮಾನ್ಯ.


ಜೇನ್ಮನೆ:

ಸಣ್ಣ ಕೊಳದ ಎದುರು ಎಲ್ಲ ಖುರ್ಚಿ ಹಾಕಿ ಕುಳಿತುಕೊಂಡಿದ್ದೆವು. ಒಂದಿಷ್ಟು ಜೇನು
ಹುಳುಗಳು ಬಂದು ಹೋಗುತ್ತಿರುವುದನ್ನು ಗಮನಿಸುತ್ತಿದ್ದೆ.

ಅವು ನಮ್ಮಲ್ಲಿ ಕೆಲ ವರ್ಷಗಳ ಹಿಂದೆ ಪರಿಚಯಿಸಲ್ಪಟ್ಟ ವಿದೇಶಿ ಜೇನು;

ಏಪಿಸ್ ಮೆಲ್ಲಿಫೆರಾಗಳು.

ಪೆಟ್ಟಿಗೆ ಎಲ್ಲಿ ಇರಬಹುದು ಎಲ್ಲೆಡೆ ಹುಡುಕಾಡಿದೆ.

ನಂತರ ಸಿಕ್ಕ ರೈತನೊಬ್ಬನೊಡನೆ ವಿಚಾರಿಸಿದರೆ, ಮನೆಯೊಂದನ್ನು ತೋರಿಸಿದ.

ಹೋಗಿ ನೋಡಿದರೆ, ಮನೆಯ ಕಿಟಕಿಗಳಲ್ಲೆಲ್ಲ ಜೇನು ಹುಳುಗಳು ಹೊರ ಬರುತ್ತಿದ್ದವು.

ಅದು ಜೇನು ಸಾಕಲು ಕಟ್ಟಿದ ಮನೆ. ಜೇನಿನ ಪೆಟ್ಟಿಗೆ ಅಲ್ಲ; ಅದೊಂದು ಜೇನ್ಮನೆ!.

ಮನೆಯ ಒಂದು ಗೋಡೆಯೇ ಬಹುಮಹಡಿಯ ಜೇನು ಪೆಟ್ಟಿಗೆ.


ಮನೆಯ ಒಳಗಡಯಿಂದ ಪೆಟ್ಟಿಗೆಯ ನಿರ್ವಹಣೆ ಸುಲಭ.

ಅಲ್ಲೇ ತುಪ್ಪ ತೆಗೆಯುವ ಯಂತ್ರ; ಮತ್ತಿತರ ಪಕರಣಗಳು.

ಜೇನು ಸಂಸಾರಕ್ಕೆ ತೊಂದರೆ ಆಗದಂತೆ ಜೇನಿನ ನಿರ್ವಹಣೆ ಸಾಧ್ಯ.
ಆದರೆ ನಮ್ಮ ಜೇನಿನ ಪೆಟ್ಟಿಗೆ ಹೀಗೆ ಹತ್ತಿರ ಇದ್ದರೆ, ಅವುಗಳ ನಡುವೆ ಕಾದಾಡಿ ಸಾಯುವ
ಸಾಧ್ಯತೆ ಇದೆಯೇನೋ!

(ಹತ್ತಿರ ಇರುವ ಎರಡು ಪೆಟ್ಟಿಗೆಯ ಹುಳುಗಳು ಹೀಗೆ ಕಾದಾಡಿದ್ದನ್ನು ಒಮ್ಮೆ ನೋಡಿದ್ದೇನೆ)

ಪರಿಣಿತರೇ ಹೇಳಬೇಕು!.


ಕೋಳಿ , ಬಾತು ಕೋಳಿಯಗಳ ಸಾಕಣೆ ಸಾಮಾನ್ಯ. ತಂತಿಯ ಬೇಲಿಯ ಹಾಕಿ, ನಡುವೆ ಒಂದು ಕೊಳ
ನಿರ್ಮಿಸಿ, ಬಾತು ಕೋಳಿಗಳನ್ನು ಬಿಡುತ್ತಾರೆ.


ಸಬ್ಸಿಡಿಯೇ ಆಧಾರ ಬೆಳೆ ಬೆಳೆಯಲು:

ಬೆಳೆಗಳು ನಿರ್ಧಾರ ಆಗುವುದು ಸರಕಾರ ನೀಡುವ ಸಬ್ಸಿಡಿಯ
ಆಧಾರದ ಮೇಲೆ. ಇಷ್ಟು ವರ್ಷ ಭೂಮಿ ಯನ್ನು ಹಾಗೆ ಬಿಟ್ಟರೂ ಸರಕಾರದಿಂದ ಸಬ್ಸಿಡಿ
ಸಿಗುತ್ತಿತ್ತಂತೆ. ಈ ವರ್ಷ ಅದನ್ನು ತೆಗೆದು ಹಾಕಿದ್ದಾರೆ. ಆದರೆ ಬೇರೆ ಬೇರೆ ಬೆಳೆಗಳಿಗೆ
ಬೇರೆ ಬೇರೆ ರೀತಿಯ ಸಬ್ಸಿಡಿಗಳಿವೆ. ಬಯಲು ಗದ್ದಗೆಳನ್ನು ಹೂಡಿ ಹುಲ್ಲು ಬೆಳೆಯುವಂತೆ
ಮಾಡಲು ಇದ್ದ ಸಬ್ಸಿಡಿ ಸಹ ಈಗ ಕಡಿಮೆಯಾಗಿದೆಯಂತೆ.

ಹಾಗಾಗಿ ಮೊದಲು ವರ್ಷಕ್ಕೆ ನಾಲ್ಕೈದು ಬಾರಿ ಟ್ರ್ಯಾಕ್ಟರ್ ಓಡಾಡುತ್ತಿದ್ದ ಗದ್ದಗೆಳಲ್ಲಿ ಈಗ ವರ್ಷಕ್ಕೆ ಒಮ್ಮೆ ಮಾತ್ರ
ಓಡುತ್ತದೆಯಂತೆ. ನಮ್ಮ ಬೇರು ಹುಳುಗಳ ಜಾತಿಗೆ ಸೇರಿದ ಚಿಟ್ಟೆಯ ಸಂತತಿ, (ಈ ಚಿಟ್ಟೆಯ ಬಗ್ಗೆ
75ಕ್ಕೂ ಹೆಚ್ಚು ಸಂಶೋಧನಾ ಪ್ರಭಂಧಗಳು ಪ್ರಕಟವಾಗಿವೆ!) ಹೀಗೆ ಪದೆ ಪದೆ ಹೂಟೆ ಮಾಡುವುದರಿಂದ
ವಿನಾಶದ ಅಂಚಿಗೆ ಹೋಗಿದ್ದಕ್ಕೆ, ಚಿಟ್ಟೆ ಪ್ರಿಯರು ಗಲಾಟೆ ಮಾಡಿದ ಪರಿಣಾಮ!.

ಯುವಕರ ನಗರ ವಲಸೆ ಇಲ್ಲೂ ಒಂದು ಸಮಸ್ಯೆಯೇ.

" ಕೆಲ ವರ್ಷಗಳ ಹಿಂದೆ 1800 ಇದ್ದ ನಮ್ಮ ಊರಿನ ಜನಸಂಖ್ಯೆ ಈಗ 1200ಕ್ಕೆ ಇಳಿದಿದೆ" ಎನ್ನುತ್ತಾನೆ, ಕಾರ್ಸ್ಟನ್.

"ಏನೂ ಯೋಚನೆ ಮಾಡಬೇಕಾಗಿಲ್ಲ. ಕೃಷಿ ಬಗ್ಗೆ ನಿಜವಾಗಿ ಆಸಕ್ತಿ ಇರೋರು ಮಾತ್ರ ಆಗ ಕೃಷಿಕರಾಗುತ್ತಾರೆ, ಅಷ್ಟೆ" ಎಂದ ಹತ್ತಿರದಲ್ಲೇ ಇದ್ದ ಕ್ರಿಸ್ತಿಯನ್. ಸ್ನಾತಕೋತ್ತರ ವಿದ್ಯಾಭ್ಯಾಸದ ನಂತರವೂ ಹಳ್ಳಿಯಲ್ಲೇ ಇರುವ ನಿರ್ಧಾರ ಮಾಡಿದ ಯುವಕ.

ನನ್ನ ಎಷ್ಟೋ ದಿನಗಳ ಪ್ರಶ್ನೆಗೆ ಉತ್ತರ ಸಿಕ್ಕಿತ್ತು!

.

ಇಪ್ಪತ್ತು ವರ್ಷಗಳ ಹಿಂದೆ ಜರ್ಮನಿಯ ಗೋಡೆ ಮುರಿದು ಎರಡು ಜರ್ಮನಿಗಳು ಒಂದಾದಾಗ, ಪೂರ್ವ ಜರ್ಮನಿಯ ಈ ಭಾಗದ ಜನ ಪಶ್ಚಿಮದತ್ತ ವಲಸೆ ಹೋದರು. ಸಾಕಷ್ಟು ಅಭಿವೃಧ್ದಿ ಹೊಂದಿದ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದರಿಂದ.

ಕಮ್ಯನಿಷ್ಟ ಆಡಳಿತದ ಕಾಲದಲ್ಲಿ ಸರಕಾರದ ಹಿಡಿತದಲ್ಲಿದ್ದ ಜಮೀನುಗಳು ಈಗ ಖಾಸಗಿ ಜಮೀನುಗಳಾಗಿವೆ.

"ಮೊದಲಾದರೆ ಸರಕಾರವೇ ಎಲ್ಲರಿಗೆ ಉದ್ಯೋಗವೊಂದನ್ನು ಕೊಡುತ್ತಿತ್ತು.
ಈಗ ಅವರೇ ಹುಡುಕಿಕೊಳ್ಳಬೇಕು. ಹಾಗಾಗಿ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುತ್ತಿದೆ.

ಕೆಲವು ಕಡೆ ಶೇ 30% ನಿರುದ್ಯೋಗಿಗಳಿದ್ದಾರೆ."

ಹಳ್ಳಿಯಲ್ಲೇ ಬೆಳೆದು ಈಗ ನಗರದಲ್ಲಿ ಉದ್ಯೋಗದಲ್ಲಿರುವ ಓಲೆಯ ಅಭಿಪ್ರಾಯ.