Monday, November 16, 2009
ಕಾಡಿನ ಹುಚ್ಚು
ಹುಚ್ಚು ಸ್ವಲ್ಪ ಹೆಚ್ಚಾಯಿತೇನೋ ಅಂತ!
ಎಲ್ಲರೂ ಕಂಪ್ಯೂಟರ್, ಸಾಫ್ಟವೇರ್ ಅಂತೆಲ್ಲ ಮುಗಿ ಬೀಳ್ತಾ ಇದ್ದ ಕಾಲದಲ್ಲಿ, ಅನಾಯಾಸವಾಗಿ ಸಿಕ್ಕ ಅದೇ ಕೆಲಸವನ್ನು ಬಿಟ್ಟು "ಕಾಡಿಗೆ ಹೋಗ್ತೇನೆ" ಅಂದಾಗ ಕರೆದು ಕುಡ್ರಿಸಿಕೊಂಡು ಬುದ್ಧಿ ಹೇಳಿದ ಗೆಳೆಯರ ನೆನಪು ಇನ್ನೂ ಕಣ್ಣ ಮುಂದಿದೆ.
ಕಾಡು, ವನ್ಯಜೀವಿ ಅದ್ಯಯನ, ಅರಣ್ಯ ಉತ್ಪನ್ನಗಳು, ಪಶ್ಚಿಮ ಘಟ್ಟಗಳು
ಅಂತೆಲ್ಲ ಹೇಳ್ತಾ, ಜಮೀನು ಖರೀದಿಸಿ,
ಕೃಷಿ ಮಾಡ್ತಾ ಇದ್ದು ಬಿಡಬೇಕೆಂದು ಕೊಂಡು,
ಖರೀದಿಸಿದ ಹೊಸ ಜಮೀನಿನಲ್ಲೇ ಒಂದು ಮನೆ ಕಟ್ಟಿಸಿ ಉಳಿಯುತ್ತಿದ್ದ ಹಾಗೆ,
ಇದ್ದಕ್ಕಿದ್ದಂತೆ, ಈಗ ಜರ್ಮನಿಗೆ ಬಂದು ಸೇರಿದ್ದೇನೆ.
ಬರ್ಲಿನ್ ಸಮೀಪದ ಗ್ರೀಪ್ಸ್ ವಾಲ್ಡ್ ವಿಶ್ವವಿದ್ಯಾಲಯದಲ್ಲಿ
ಮತ್ತೆ ಪಕ್ಕಾ ವಿದ್ಯಾರ್ಥಿಯಾಗುತ್ತಿದ್ದೇನೆ.
"ಕಾಡಿನ ಮಧ್ಯನೇ ಹುಟ್ಟಿ ಬೆಳೆದರೂ ಕಾಡಿನ ಹುಚ್ಚು ಯಾಕನೋ?"
ಅಂತ ಆಯಿ ಅಗಾಗ ಕೇಳುವ ಪ್ರಶ್ನೆಗೆ ಉತ್ತರವಂತೂ ನನ್ನಲ್ಲಿ ಇಲ್ಲ.
ಕಾಡು ನನ್ನ ಪಾಲಿನ ಹುಚ್ಚಂತೂ ಹೌದು.
ಅದೇ ಈ ವರೆಗೆ ನೆದರ್ ಲ್ಯಾಂಡ್ಸ್, ನೇಪಾಳ, ಫಿಲಿಪ್ಪನ್ಸ್, ಥೈಲ್ಯಾಂಡ್, ಮತ್ತೆ ಈಗ ಜರ್ಮನಿಗೆ ಕರೆದು ತಂದದ್ದು.
ಕ್ಷಮಿಸಿ ಬರೆಯುತ್ತೇನೆ ಅಂತ ಹೇಳಿದವನಿಗೆ ಈ ಬದಲಾವಣೆ ಕಾರಣದಿಂದ,
ಅಥವಾ ಹಳ್ಳಿಯ ಸೀಮಿತ ಅಂತರ್ಜಾಲ ಸೌಲಭ್ಯದಿಂದ ಬರೆಯಲಾಗಲಿಲ್ಲ
ಅಂತ ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ.
ಎಲ್ಲಕ್ಕೂ ಆಲಸ್ಯವೇ ಕಾರಣ ಅಂತ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು.
ಈಗಾದರೂ ಕಾರಣ ಹೇಳದೇ ಬರೆಯುವ ಪ್ರಯತ್ನ ಮಾಡಲೇ ಬೇಕು.
Sunday, June 21, 2009
ಸಾರಿ! ಕಾಯಿಸಿದ್ದಕ್ಕೆ!
ತುಂಬಾ ದಿನಗಳಿಂದ ಬ್ಲಾಗ ಬರೆಯಲು ಸಾಧ್ಯವಾಗಲಿಲ್ಲ. ಕ್ಷಮಿಸಿ. ಸುತ್ತಾಟ ಸ್ವಲ್ಪ ಹೆಚ್ಚಾಯಿತು. ಖಂಡಿತ ಇನ್ನೊಂದೆರಡು ದಿನಗಳಲ್ಲಿ ಬರೆಯುತ್ತೇನೆ.
ಧನ್ಯವಾದಗಳು,
ಬಾಲು ಸಾಯಿಮನೆ
Monday, March 23, 2009
ಕೊನೆಯ ಪುಟವೋ? ಮೊದಲ ಪುಟವೋ?
ದಾಂಡೇಲಿ ಕಾಡಿನಲ್ಲಿ ಈಗ ಶೋಕಾಚರಣೆ. ಆರು ದಶಕಗಳಿಂದ ಕಾಡಿಗೆ ಸೇವೆ ಸಲ್ಲಿಸಿದವರು ಕರ್ತವ್ಯ ಮುಗಿಸಿ ಹೊರಡುವ ತಯಾರಿಯಲ್ಲಿದ್ದಾರೆ.
ಪ್ರತಿ ವರ್ಷ ಎಲೆ ಉದುರಿಸಿ, ಗೊಬ್ಬರ ಹಾಕಿ, ಬೇರೆ ಯಾರೂ ಬರದ ಹಾಗೆ ಮುಳ್ಳು ಬೇಲಿ ಕಟ್ಟಿ ಕಾಡನ್ನು ಬೆಳೆಸುವ ಪ್ರಯತ್ನ ಮಾಡಿದವರು, ಕಾಡಿಗೆ ವಿದಾಯ ಹೇಳ ಹೊರಟಿದ್ದಾರೆ.
ಎಲ್ಲಿ ಬೆಂಕಿ ಹಾಕಬಹುದೆಂಬ ಅತಂಕ. ......
ಇದೊಳ್ಳೆ ಕಥೆ!
ಕರ್ತ್ಯವ್ಯ ಮುಗಿಸಿ ಹೊರಟರೆ ಯಾರು ಬೆಂಕಿ ಹಾಕುತ್ತಾರೆ ಎಂಬ ಪ್ರಶ್ನೆಯೆ?
ಕರ್ತ್ಯವ್ಯ ಮುಗಿಸಿ ಹೊರಟವರು; ಮನುಷ್ಯರಲ್ಲ; ಸಸ್ಯ. ಹೆಸರು ಬಿದಿರು.
ಆ ವಿದ್ಯಮಾನದ ಹೆಸರು "ಕಟ್ಟೆ".- ಬಿದಿರು ಕಟ್ಟೆ.
ಬಿದಿರಿನ ಕಟ್ಟೆ ಅಂದರೆ ಹೂ ಬಿಡುವುದು.
ಬಿದಿರು ಹೂ ಬಿಡುವುದು ನಲವತ್ತರಿಂದ ಅರವತ್ತು ವರ್ಷಗಳಿಗೊಮ್ಮೆ ಮಾತ್ರ ಎಂದು ಎಲ್ಲರಿಗೂ ಗೊತ್ತಿರಬಹುದು.
ಹೂ ಬಿಟ್ಟು ಬೀಜವಾಗುವ ಈ ಪ್ರಕ್ರಿಯೆ ಬಿದಿರಿನ ಜೀವನದಲ್ಲಿ ಒಮ್ಮೆ ಮಾತ್ರ.
ಅಕ್ಕಿಯ ಹಾಗೆ ಕಾಣುವ ಬಿದಿರ (ಬೀಜ) ಅಕ್ಕಿ ಬೇಯಿಸಿ ಊಟ ಮಾಟಬಹುದು.
'ಜಡ್ಡು ಭತ್ತ'ದ ಹಾಗೆ ಕಾಣುವ ಈ ಅಕ್ಕಿ ರುಚಿ ಮಾತ್ರ ಸ್ವಲ್ಪ ಭಿನ್ನ.
ನನ್ನಜ್ಜ ಮಾತಿನ ಮಧ್ಯ , "ಬಿದಿರು ಕಟ್ಟೆ ವರ್ಷ" ಎಂದು ಅದನ್ನೊಂದು ಮೈಲು ಗಲ್ಲಾಗಿ ಉಪಯೋಗಿಸತ್ತಿದ್ದುದು ನೆನಪಿದೆ. ಬಿದಿರು ಕಟ್ಟೆ ಯನ್ನು ನೋಡಿದ ಜನಕ್ಕೆ ಅದೊಂದು ಮರೆಯಲಾಗದ ವರ್ಷ ಎಂದೆನಿಸುತ್ತದೆ. ಬಿದಿರಿನ ಅಕ್ಕಿ ಊಟ ಮಾಡಿ ಬದುಕಿದ್ದನ್ನು ನೆನಪಿಸುವ ಜನ ಇನ್ನೂ ನಮಗೆ ಅಲ್ಲಲ್ಲಿ ಸಿಗುತ್ತಾರೆ.
ಕರ್ನಾಟಕದಲ್ಲಿ ಬಿದಿರ ಕಟ್ಟೆ ಪ್ರಾರಂಭವಾಗಿ ನಾಲ್ಕೈದು ವರ್ಷಗಳೇ ಆದವು. ಕೆಲವು ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯದಲ್ಲಿ ಬಿದಿರಿಗೆ ಕಟ್ಟೆ ಬಂದು ಎಲ್ಲ ಒಣಗಿ ನಿಂತಾಗ ಬೆಂಕಿ ಬಿದ್ದಿದ್ದರ ಪರಿಣಾಮವಾಗಿ ಕಾಡೆಲ್ಲ ನಾಶವಾಗಿದ್ದು ನೆನಪಿರಬಹುದು.
ದಾಂಡೇಲಿಯಲ್ಲಿ ಕಳೆದ ವರ್ಷದಿಂದ ಬಿದಿರಿಗೆ ಹೂವು ಬರಲು ಪ್ರಾರಂಭವಾಗಿದೆ. ಕಾಡೆಲ್ಲ ಒಣಗಿ ನಿಂತಿದೆ. ಬೆಂಕಿ ಬಿದ್ದರೆ ಕಾಡೆಲ್ಲ ಉರಿದು ಹೋಗುವಂತಾಗಿದೆ. ಅರಣ್ಯ ಇಲಾಖೆ ಸಹ ಆತಂಕದಿಂದಿದೆ.
ಈಶಾನ್ಯ ರಾಜ್ಯಗಳಲ್ಲಿ ಈಗಷ್ಟೇ ಬಿದಿರು ಕಟ್ಟೆ ಮುಗಿದಿದೆ. ಭಾರೀ ಬರಗಾಲ ಬರಬಹುದೆಂಬ ಜನರ ನಿರೀಕ್ಷೆ ಇನ್ನೂ ಜೀವಂತವಾಗಿದೆ. (ಆರ್ಥಿಕ ಹಿಂಜರಿತಕ್ಕೂ ಇದಕ್ಕೂ ಸಂಭಂಧ ಇರಲಿಕ್ಕಿಲ್ಲ ಬಿಡಿ.)
ಸಾಮಾನ್ಯವಾಗಿ ಬಿದಿರಿನ ಅಕ್ಕಿ ಹೇರಳವಾಗಿ ಸಿಗುವುದರಿಂದ ಇದನ್ನು ತಿಂದು ಇಲಿಗಳ ಸಂಖ್ಯೆ ಹೆಚ್ಚಾಗುತ್ತದೆ. ನಂತರದಲ್ಲಿ ಅಹಾರ ಇಿಲ್ಲದ ಇಇಲಿಗಳು ಸಮೀಪದ ಗದ್ದೆಗಳಿಗೆ ಧಾಳಿ ಇಟ್ಟು ಬೆಳೆ ಹಾನಿ ಮಾಡುತ್ತವೆ. ಅಹಾರ ಿಲ್ಲದ ಿಲಿಗಳು ಸಾವು ಪ್ಲೇಗ ನಂತಹ ರೋಗಕ್ಕೆ ಕಾರಣವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಸಿಗುವ ವಿವರಣೆ.
ಅರಣ್ಯ ಇಲಾಖೆಯಂತೂ ಅದಷ್ಟು ಬಾಚಿಕೊಳ್ಳುವ ತಯಾರಿಯಲ್ಲಿದೆ. ಒಣ ಬಿದಿರು ಇದ್ದರೆ ಬೆಂಕಿ ಬಿದ್ದಾಗ ಆರಿಸುವುದು ಸಾಧ್ಯವಿಲ್ಲವೆಂಬ ನೆಪವೊಡ್ಡಿ ನಿರಂತರ ಬಿದಿರು ಕಡಿದು ಸಾಗಿಸುತ್ತಿದೆ.
ಬಿದಿರು ಹಾಗೆ ಒಮ್ಮೆಲೆ ಏಕೆ ಹೂ ಬಿಟ್ಟು ಸತ್ತು ಹೋಗುತ್ತದೆ?
ವೈಜ್ಣಾನಿಕ ಕಾರಣಗಳು ಹಲವಾರು ಅಂತರಜಾಲದಲ್ಲಿ ಸಿಗಬಹುದು.
ಆದರೆ ನನಗನ್ನಿಸುವುದು, ಅದೊಂದು ನಿಸರ್ಗ ಚಕ್ರದ ಬಾಗ ಎಂದು ಮಾತ್ರ. ಒಂದು ಪಾಳು ಬಿದ್ದ ಜಾಗದಲ್ಲಿ ಸಸ್ಯ ಬೆಳೆಯುವಪ್ರಕ್ರಿಯೆಯನ್ನೊಮ್ಮೆ ನೋಡಿ. ಕಳೆ, ಹುಲ್ಲು, ಒಂದೊಷ್ಟು ಪೊದೆ ಜಾತಿಯ ಸಸ್ಯಗಳು, ಹೀಗೆ ಒಂದಾದ ಮೇಲೊಂದರಂತೆ ಸಸ್ಯಗಳು ಬೆಳೆಯುತ್ತವೆ. ಅವು ಅಲ್ಲೇ ಬಿದ್ದು ಕೊಳೆತು ಮಣ್ಣು ಮತ್ತಷ್ಟು ಫಲವತ್ತಾಗಿ, ಆ ಸಸ್ಯಗಳ ನಡುವೆ ಮರಗಳಗುವ ಸಸ್ಯಗಳ ಬೀಜ ಮೊಳಕೆಯೊಡೆಯುತ್ತವೆ.
(ಹಳೆ ಮೈಸೂರು ಬಾಗದಲ್ಲಿ "ನಿನ್ನ ಮನೆ ಎಕ್ಕುಟ್ಟೋಗಾ!" ಎಂದು ಬೈಯ್ಯುವುದು ಕೇಳಿರಬಹುದು. . ಸಾಮಾನ್ಯವಾಗಿ ಹಾಳು ಬಿದ್ದ ಜಾಗದಲ್ಲಿ ಮೊದಲು ಬೆಳೆಯುವ ಸಸ್ಯ ಎಂದರೆ ಎಕ್ಕದ ಜಾತಿಯ ಗಿಡ. ಅಂದರೆ ನಿನ್ನ ಮನೆ ಜಾಗದಲ್ಲಿ ಎಕ್ಕದ ಗಿಡ ಹುಟ್ಟಲಿ ಎಂದು.)
ನಿತ್ಯ ಹರಿದ್ವರ್ಣ ಕಾಡಿನಲ್ಲಿ ಗುರಿಗೆ ಜಾತಿಯ ಸಸ್ಯಗಳು ಬೆಳೆಯುತ್ತವೆ. ಕಾಡಿನ ಅಂಚಿನಲ್ಲಿ ಬೆಳೆಯು ಈ ಸಸ್ಯಗಳು, ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ಹೂ ಬಿಢುತ್ತವೆ. ಮಳೆ ಹೆಚ್ಚು ಬೀಳುವ ಈ ಭಾಗದಲ್ಲಿ ನಾಲ್ಕು ವರ್ಷ ಕಾಡನ್ನು ರಕ್ಷಣೆ ಮಾಡಿ, ತರಗೆಲೆ ಹಾಕಿ, ಫಲವತ್ತತೆ ಹೆಚ್ಚಿಸಿದರೆ, ಉಳಿದ ಮರಗಳಾಗುವ ಸಸ್ಯಗಳ ಬೇಜ ಇವುಗಳ ಸಂಧಿಯಲ್ಲಿ ಮೊಳಕೆಯೊಡೆದು, ಬೆಳೆಯುತ್ತದೆ. ಹಾಗೆ ಆ ಮರಗಳು ಬೆಳೆಯಲು ತೊಡಗಿದಾಗ 'ಗುರಿಗೆ' ಅಲ್ಲಿಂದ ಮರೆಯಾಗುತ್ತದೆ. ತನ್ನ ಕರ್ತವ್ಯ ಮುಗಿಯಿತೆಂದು ಪಕ್ಕದ ಹುಲ್ಲುಗಾವಲಿನಲ್ಲಿತ್ತ ಸಾಗುತ್ತದೆ.
ಅರೆ ನಿತ್ಯ ಹರಿದ್ವರ್ಣ ಮತ್ತು ತೇವಾಂಶ ಭರಿತ ಕಾಡಿನಲ್ಲಿ ಇದೇ ಜಾತಿಯ ಇನ್ನೊದು ಗುರಿಗೆ ಇದೆ. ಅದು ಹೂ ಬಿಡುವುದ ಎಂಟು ವರ್ಷಕ್ಕೊಮ್ಮೆ. ಮಳೆ ಕಡಿಮೆ ಬೀಳುವ ಕಾಡಿನಲ್ಲಿ ಮಣ್ಣು ಫಲವತ್ತಾಗಲೂ ಸಮಯಬೇಕಲ್ಲವೇ?
ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುವ "ಕುರುಂಜಿ"ಯ ಬಗ್ಗೆ ಕೇಳಿರಬಹುದು. ಅದೂ ಸಹ ಈ ಗುಂಪಿನ ಸಸ್ಯವೇ. ಮುನ್ನಾರ್ ನಂತಹ ತೀರ ಇಳಿಜಾರಿನ ಹುಲ್ಲು ಗಾವಲಿನಲ್ಲಿ ಬೆಳೆಯುವ ಸಸ್ಯ.
ಬಿದಿರು ಬೆಳೆಯುವುದು ಎಲೆ ಉದುರಿಸುವ ಕಾಡಿನಲ್ಲಿ. ಅಲ್ಲಿ ಸಾಮಾನ್ಯವಾಗಿ ಬೀಳುವ ಮಳೆ 2000 ಮೀ.ಮೀ ಗಿಂತ ಕಡಿಮೆ. ಕಡಿಮೆ ನೀರನ್ನು ಉಪಯೋಗಿಸಿಕೊಂಡು ಬೂಮಿಯನ್ನು ಫಲವತ್ತ ಮಾಡುವ ಜವಾಬ್ದಾರಿ ಅವಕ್ಕೆ. ಹಾಗಾಗಿ 45 ರಿಂದ 60 ವರ್ಷದವೆರೆಗೆ ಹೂ ಬಿಡುವ ಬಿದಿರುಗಳಿವೆ.
ಎಲೆ ಉದುರಿಸಿ, ತಮ್ಮ ಮುಳ್ಳುಗಳಿಂದ ಬೇಲಿ ಮಾಡಿ ಮೊಳಕೆಯೊಡೆಯುತ್ತಿರುವ ಇತರ ಸಸ್ಯಗಳ ಚಿಗುರುಗಳನ್ನು ಸಂರಕ್ಷಿಸುತ್ತಿದ್ದವು, ತನ್ನ ಕರ್ತ್ವವ್ಯ ಮುಗಿಯಿತೆಂದು ಹೊರಟರೆ, ಮನುಷ್ಯ ಗೀಚುವ ಒಂದು ಬೆಂಕಿ ಕಡ್ಡಿ ಅಷ್ಟೆಲ್ಲ ವರ್ಷದ ಪ್ರಯತ್ನ ವ್ಯರ್ಥಮಾಡಿಬಿಡುತ್ತವೆ.
ಛಲಬಿಡದ ನಿಸರ್ಗ ಮತ್ತೆ ಬಿದಿರನ್ನೇ ಬೆಳೆಸಲು ಪ್ರಾರಂಭಿಸುತ್ತದೆ.
Tuesday, March 17, 2009
ಹೆಜ್ಜೆ ಅಳಿಸಿ ಹೋಗುವ ಮುನ್ನ.........
ಅಷ್ಟೆಲ್ಲ ಆಸಕ್ತಿಯಿಂದ ಹೊಡೆದ ಫೋಟೊ ಯಾವುದೂ ಅಲ್ಲ. ಒಂದು ಹುಲಿ ಹೆಜ್ಜೆಯದು.
Monday, March 16, 2009
Sunday, March 15, 2009
ಶರಾವತಿ ಕಣಿವೆಗೆ ಆನೆಗಳ ವಿದಾಯ
ಜಲ ವಿದ್ಯುತ ಯೋಜನೆಗಳು, ಆ ಕಣಿವೆಯ ಕಾಡನ್ನು ನುಂಗಿದ ಮೇಲೆ ಅಳಿದುಳಿದ ಪಕ್ಕದ ಕಾಡಿನಲ್ಲಿ
ಬಾಳಿಕೊಂಡಿದ್ದ ಆನೆ ಮೊನ್ನೆ ಮಹಿಮೆಯ ಸಮೀಪದ ಕಾಡಿನಲ್ಲಿ ಸತ್ತು ಬಿದ್ದದ್ದು ಕಂಡುಬಂದಿದೆ.
ಮೈಸೂರು ಪ್ರಾಂತದಿಂದ ಈ ಭಾಗಕ್ಕೆ ವಲಸೆ ಬರುತ್ತಿದ್ದವು ಎಂದು ಶತಮಾನಗಳ ಹಿಂದಿನ ಧಾಖಲೆ ಹೇಳುತ್ತದೆ. ಹಾಗೆ ಬಂದವಕ್ಕೆ ಹಿಂದೆ ಹೋಗಲಾರದಂತೆ ಮಧ್ಯದ ಕಾಡು ನಾಶವಾಗಿ ಇಲ್ಲೇ ಉಳಿಯಬೇಕಾಯಿತು. ನಂತರದ ಅಭಿವೃದ್ದಿ ಯೋಜನೆಗಳು ಈ ಪ್ರದೇಶವನ್ನೂ ಛಿಧ್ರಗೊಳಿಸಿದವು.
ಉತ್ತರ ಕನ್ನಡದಲ್ಲಿ ಈಗ ಆನೆಗಳಿರುವುದು ದಾಂಡೇಲಿಯ ಸುತ್ತ ಮುತ್ತ ಮಾತ್ರ. ಸಂಖ್ಯೆ ಕೇವಲ ಅರ್ಧ ಶತಕದ ಆಜೂ ಬಾಜು. ಅವೂ ಅಲ್ಲಿ ಬಾಳಲಾರದೇ ಅರ್ಧ ಮಹಾರಾಷ್ಟ್ರಕ್ಕೆ, ಉಳಿದರ್ಧ ಯಲ್ಲಾಪುರ, ಮುಂಡಗೋಡದ ಮಾರ್ಗದಲ್ಲಿ ಹಾವೇರಿ ಜಿಲ್ಲೆ ಹೋಗುತ್ತಿವೆ. ಸರಕಾರಿ ದಾಖಲೆಗಳಲ್ಲಿ ಶೇ ೮೦ ಪ್ರತಿಶತ ಕಾಡು ಇರುವ ಉತ್ತರ ಕನ್ನಡ ಜಿಲ್ಲೆ ಇಷ್ಟು ಆನೆಗಳೂ ಭಾರವಾದವೇ.
ನಿಸರ್ಗ ಮತ್ತು ಮನುಷ್ಯನ ಹೋರಾಟದಲ್ಲಿ ನಿಸರ್ಗ ಈ ಕ್ಷಣಕ್ಕೆ ಸೋತಂತೆ ಅನ್ನಿಸಿದರೂ, ಸೋತವರು ನಾವೇ ಎಂದು ತಿಳಿಯಲು ಕಾಲ ಬೇಕು.
Friday, March 6, 2009
ನಾನೂ ಬ್ಲಾಗ್ ಬರೆಯಲು ಶುರು ಮಾಡಿದೆ !
ಬ್ಲಾಗ್ ಬರೆಯಲು ಶುರು ಮಾಡುವಾಗ ಶಾಲೆಗೆ ಹೋಗುವ ನೆನಪಾಗುತ್ತಿದೆ . ಕಾಡು ಸಂಪಿಗೆ ಹಣ್ಣು, ಮುಳ್ಳು ಹಣ್ಣು ನಡುವೆ ಅ ಆ ಬರೆದ ಹಾಗೆ.