ದಾಲ್ ಲೇಕ್ ನ ನೋಟ;
ಕುಂಕುಮ ಕೇಸರಿ: ಬಣ್ಣದಷ್ಟೇನೂ ಆಕರ್ಷಕವಲ್ಲದ ಕೃಷಿ
ಹೊರಟಿದ್ದು ಕನ್ಯಾಕುಮಾರಿಗೆ. ಹೋಗಿದ್ದು ಕಾಶ್ಮೀರಕ್ಕೆ. ಮಗಳ ಅಕ್ಟೋಬರ್ ರಜೆಯಲ್ಲಿನ ಪ್ರವಾಸಕ್ಕೆಂದು ಕನ್ಯಾಕುಮಾರಿಗೆ ಹೋಗೋಣವೆಂದು ಟ್ರೇನ್ ಟಿಕೇಟಿಗೆ ವಿಚಾರಿಸಿದರೆ, ಟಿಕೆಟ್ ಸಿಗಲಿಲ್ಲ. ಕಾಶ್ಮೀರಕ್ಕೆ ಹೋಗಲು ಸೀಟ್ ಇದೆ ಎಂದ. ಕಾಶ್ಮೀರ ಎಂದ ತಕ್ಷಣ ನೆನಪಾಗಿದ್ದು ಕೇಸರಿ ಕೃಷಿ. ಅಲ್ಲಿನ ಹಿಮ ನನಗೆ ಹೊಸದಾಗಿರಲಿಲ್ಲ. ಸೇಬು ಕೃಷಿ ಸಹ. ಯುರೋಪಿನಲ್ಲಿ ನೋಡಿದ್ದೆ. ಆದರೆ ಕೇಸರಿ ಬೆಳೆ ಬಗ್ಗೆ ಏನೋ ಒಂಥರ ಆಸಕ್ತಿ. ವಿಚಾರಿಸಿದರೆ, ಈಗಾಗಲೇ ಕೇಸರಿ ಬೆಳೆ ಹೊಲದಲ್ಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಆ ವಾರದಲ್ಲಿ ಕೇಸರಿ ಹೂವುಗಳನ್ನು ಕೀಳಲಿದ್ದಾರೆ ಎನ್ನುವುದು ಮತ್ತಷ್ಟು ಗಡಿಬಿಡಿಯಲ್ಲಿ ಹೋಗಲು ನಿರ್ಣಯಿಸಲು ಕಾರಣವಾಗಿತ್ತು. ಅದೇ ವಾರದಲ್ಲಿ ದೆಹಲಿಯಲ್ಲಿದ್ದ ಕಾರ್ಯಕ್ರಮವೊಂದನ್ನು ನೆಪವಾಗಿಸಿ ಕೊಂಡು ಹೊರಟೇಬಿಡುವ ಯೋಚನೆ ಮಾಡಿದೆವು. ಆದರೆ ಟ್ರಾವೆಲ್ ಏಜಂಟ್ ಹೋಗೊ ಟಿಕೆಟ್ ಮಾತ್ರ ಇದೆ. ರಿಟರ್ನ್ ಟಿಕೆಟ್ ಇಲ್ಲ; ಮುಂದಿನ ಎರಡು ವಾರ ಸಿಗೋದು ಕಷ್ಟ ಎಂದು ಹೇಳಬೇಕೆ?. ಹಿಂತಿರುಗುವ ಟಿಕೆಟ್ ಇಲ್ಲದೆಯೇ ಹೊರಟಿದ್ದೆವು. ಕಾಶ್ಮೀರಕ್ಕೆ ಹೊರಟಿದ್ದೀರಾ? ಅದೂ ರಿಟರ್ನ್ ಟಿಕೆಟ್ ಇಲ್ಲದೆ ಎಂದವರೇ ಹೆಚ್ಚು.ಶ್ರೀನಗರಕ್ಕೆ ಹೊದ ಮೊದಲ ದಿನದಿಂದಲೇ ನಾವು ಕೇಸರಿ ಎಲ್ಲಿ ಬೆಳೆಯುತ್ತಾರೆ ಎಂದು ವಿಚಾರಿಸುತ್ತಲೇ ಇದ್ದೆವು. ವಾಹನ ಚಾಲಕ ಇಲ್ಲೆಲ್ಲೂ ಇಲ್ಲ, ಇನ್ನೊಂದು ದಾರಿಯಲ್ಲಿದೆ ಎಂದು ಹೇಳಿದ್ದ. ಈದ್ ಹಬ್ಬದ ದಿನವಾದ್ದರಿಂದ ಅಲ್ಲಿಗೆ ಹೋಗುವ ದಿನವನ್ನೂ ನಾವು ಮುಂದೂಡಲೇ ಬೇಕಾಗಿತ್ತು. ಅಂತೂ ಅಲ್ಲಿಗೆ ಹೋದ ಮೂರನೇ ದಿನ ನಾವು ಕೇಸರಿ ಹುಡುಕಲು ಹೊರಟಿದ್ದೆವು.
ದಾಲ್ ಲೇಕ್ ನಲ್ಲಿ
ಹೂ ಮಾರುವವ;
ಕಣ್ಣು ತುಂಬಿದ ಕೇಸರಿ:
ಬೆಳಿಗ್ಗೆ ಹೊರಟಿದ್ದು ಪಹಲ್ಗಾಮ್ ಎನ್ನುವ ಪ್ರವಾಸಿ ತಾಣಕ್ಕೆ. ಶ್ರೀನಗರದಿಂದ ೯೬ ಕೀ.ಮೀ. ದೂರದಲ್ಲಿರುವ ಪಹಲ್ಗಾಮ್ ಅಮರನಾಥ ದೇವಾಲಯಕ್ಕೆ ಹೋಗುವ ದಾರಿಯಲ್ಲಿವ ಒಂದು ಊರು. ಅಮರನಾಥ ಯಾತ್ರೆಗೆ ಇಲ್ಲಿಂದ ಮುಂದೆ ನಡೆದು ಹೋಗಬೇಕು.
ಇನ್ನೇನು ಒಂದು ಘಂಟೆ ಪ್ರವಾಸ ಮಾಡಿದ್ದೆವಷ್ಟೆ! ಶ್ರೀನಗರದ ಕೆರೆ, ಪರ್ವತಗಳು ಮರೆಯಾಗಿ ಬಯಲು ನಾಡು ಶುರುವಾದಂತೆ ಕಾಣಿಸುತ್ತಿತ್ತು. ನಮ್ಮ ಅರೆ ಮಲೆನಾಡು ಪ್ರದೇಶದ ಹಾಗೆ ಕಣ್ಣಿಗೆ ಕಾಣುವಷ್ಟು ದೂರ ಬಯಲು. ಮರಗಳೇ ಇಲ್ಲ. ಇದ್ದಕ್ಕಿದ್ದಂತೆ ಕಾಣುವಷ್ಟು ದೂರವಿದ್ದ ಬಯಲಿನ ತುಂಬ ನೇರಳೆ ಬಣ್ಣದ ಹೂವುಗಳು!. ಉದ್ದುದ್ದ ಏರು ಮಡಿಯಲ್ಲಿ ನೆಲದೆತ್ತರದಲ್ಲಿ ಹಾಸಿ ಬೆಳೆದ ಹೂವುಗಳು. ವಾಹನದಲ್ಲಿದ್ದ ಎಲ್ಲರೂ ಒಮ್ಮೆಲೇ ’ನಿಲ್ಲಿಸು’ ಎಂದು ಕೂಗಿದ್ದೆವು. ನಾವು ನಾಲ್ಕು ದಿನಗಳಿಂದ ಹುಡುಕುತ್ತಿದ್ದ ಕೇಸರಿ ಬೆಳೆಯ ಹೊಲ ಅದಾಗಿತ್ತು. ಕಾಶ್ಮೀರ ಎಂದಾಕ್ಷಣ ನನಗಂತೂ ನೆನಪಿಗೆ ಬರುತ್ತಿದ್ದುದು ಕೇಸರಿ ಬೆಳೆಯೇ!. ಕಾಶ್ಮೀರಕ್ಕೆ ಹೊರಟಿದ್ದೂ ಬೆಳೆ ನೋಡುವುದಕ್ಕಾಗಿಯೇ ಆಗಿತ್ತು. ಅದು ಎದುರು ಸಿಕ್ಕಾಗ ಖುಷಿಯೋ ಖುಷಿ.
ಕೇಸರಿ ಹೊಲ ಕಂಡ ತಕ್ಷಣ ಅಲ್ಲೇ ನಿಲ್ಲಿಸಿ ಹೊಲ ಸುತ್ತ ತೊಡಗಿದ್ದೆವು. ಆದರೆ ಹೊಲ ಎಲ್ಲ ಖಾಲಿ ಖಾಲಿ. ಅಲ್ಲಲ್ಲಿ ಒಂದಿಷ್ಟು ಪ್ರವಾಸಿಗರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ನಮಗೆ ಬೇಕಿದ್ದದ್ದು ರೈತರಾಗಿತ್ತು. ನಮ್ಮ ಡ್ರೈವರ್ ಇರ್ಫ಼ಾನ್‌ನಿಗೆ ಪಹಲ್ಗಾಮ್ ತೋರಿವ ಆಸೆ. ನಾವು ಇಲ್ಲೆ ಕೇಸರಿ ಹೊಲದಲ್ಲಿ ಸುತ್ತಾಡುತ್ತೇವೆ. ನಮಗೆ ರೈತರನ್ನು ಮಾತಾನಾಡಿಸಬೇಕು ಅವರನ್ನು ತೋರಿಸು, ಅಷ್ಟೆ ಸಾಕು ಎನ್ನ ಬೇಕಾಯಿತು. ರೈತರ ಮನೆ ಇರೋದು ಇನ್ನೊಂದು ಕಿಲೋಮೀಟರ್ ದೂರ ಎಂದ. ಆತನಿಗೆ ತೋರಿಸಬೇಕಾದ ಪ್ರವಾಸಿ ತಾಣ ತೋರಿಸದಿದ್ದರೆ, ಟ್ರಾವೆಲ್ ಏಜಂಟ್ ಬೈದಾನೆಂಬ ಹೆದರಿಕೆ. ನಮಗೆ ಪ್ರವಾಸಿ ತಾಣ ನೋಡದಿದ್ದರೂ ಪರವಾಗಿಲ್ಲ, ಕೇಸರಿ ಕೃಷಿಕ ಬೇಕು ಎಂದು. ಕೊನೆಗೆ ಅಲ್ಲೇ ಒಂದು ಸಣ್ಣ ಹಳ್ಳಿಗೆ ಕರೆದೊಯ್ದ.
ಸಣ್ಣ ಹಳ್ಳಿ. ಮೂವತ್ತು ನಲವತ್ತು ಮನೆಗಳಿರಬಹುದು. ಹೊಟ್ಟೆಯ ಮೇಲೆ ’ಕಂಡೀಲಾ’ ಇಟ್ಟುಕೊಂಡು ಮೇಲೆ ಉದ್ದದ ಶೇರವಾನಿ ಹಾಕಿರುವ ಗಂಡಸರು. ಕಂಡೀಲ ಎಂದರೆ ಒಂದು ಸಣ್ಣ ಮಣ್ಣಿನ ಪಾತ್ರೆ. ಇದ್ದಲಿ ಹಾಕಿ ಬೆಂಕಿ ಹೊಗೆ ಬರುವಂತೆ ಮಾಡಿ ಅದನ್ನು ಹೊಟ್ಟೆಯ ಮೇಳೆ ಇಟ್ಟುಕೊಂಡಿರುತ್ತಾರೆ. ಬೆಚ್ಚಗಿರಲಿ ಎಂದು. ಆ ಮಣ್ಣಿನ ಪಾತ್ರೆಗೆ ಬೇರಿನಿಂದ ಚಂದದ ನೇಯ್ಗೆ ಮಾಡಿರುತ್ತಾರೆ. ಶೇರವಾನಿ ಒಳಗೆ ಕಂಡೀಲವನ್ನು ಕೈಗಳಲ್ಲಿ ಹಿಡಿದಿರುವುದರಿಂದ ಶೇರವಾನಿಯ ತೋಳು ಬರೀ ನೇತಾಡುತ್ತಿರುತ್ತದೆ. ಮೊದಲ ಬಾರಿ ನೋಡಿದರೆ ಇವರಿಗೆ ಕೈ ಇಲ್ಲವೇನೋ ಎನ್ನುಸವ ಹಾಗೆ.
ಮೊದಲು ಮಾತನಾಡಿಸಿದ ರೈತ ಫ಼ಾರೋಕ್ ಭಟ್. ಲೇತಾಪುರ ಎನ್ನುವ ಹಳ್ಳಿ. ಪಾಂಪೋರ್ ಜಿಲ್ಲೆಯ ಒಂದು ಹಳ್ಳಿ. ಪಾಂಪೋರ್ ಜಿಲ್ಲೆ ಕಾಶ್ಮೀರದಲ್ಲಿ ಅಒಟ್ಟು ಕಾಶ್ಮೀರದ ಕೇಸರಿ ಬೆಳೆಯ ಶೇ ೯೦ ಈ ಜಿಲ್ಲೆಯಿಂದಲೇ ಉತ್ಪಾದನೆ ಆಗುವುದಂತೆ. ಆಮ್ಮು ಪ್ರದೇಶದ ಕಿಸ್ತವಾರ್ ಜಿಲ್ಲೆಯಲ್ಲೂ ಸ್ವಲ್ಪ ಪ್ರಆಣದ ಬೆಳೆ ಇದೆಯಂತೆ.
ಪಾರೋಕ್ ಭಟ್ಟರ ಕುಟುಂಬ್ ಮೊದಲಿನಿಂದಲೂ ಕೇಸರಿ ಕೃಷಿಯಲ್ಲಿ ಬದುಕಿದ ಕುಟುಂಬ. ಇರೋದು ಹದಿನೈದು ಕನಾಲ್. ಕನಾಲ್ ಎಂದರೆ ಜಮೀನಿನ ಅಳತೆ. ಹತ್ತು ಕನಾಲ್ ಎಂದರೆ ಒಂದು ಎಕರೆ ಇರಬಹುದು ಎಂದ. ಸರಿಯಾಗಿ ಆತನಿಗೂ ಗೊತ್ತಿಲ್ಲ.
ಪ್ರತಿ ಹೂವಿನಲ್ಲಿ ಸಿಗೋದು ಮೂರು ಕೇಸರಿ ಕುಸುಮ; ಮೂರು ಹಳದಿ ಕುಸುಮ ಇರುತ್ತದೆ. ಈ ಹಳದಿ ಕುಸುಮವನ್ನು ಉಪಯೋಗಿಸುವುದಿಲ್ಲ. ಕೇಸರಿ ಬಣ್ಣದ ಭಾಗಕ್ಕೆ ಮೊಂಗ್ರ ಅಥವಾ ನೆವಲ್ ಎಂದು ಎಂದು ಕರೆಯುತ್ತಾರೆ. ಅದರ ಬುಡದ ತಿಳಿ ಕೇಸರಿ-ಹಳದಿ ಭಾಗವನ್ನು ಲಾಚ್ಚಾ ಎಂದು ಕರೆಯುತ್ತಾರೆ. ಮೊಂಗ್ರಾ ಕೇಸರಿ ನಾವು ಉಪಯೋಗಿಸುವ ಉತ್ತಮ ಕೇಸರಿ. ಲಾಚ್ಚಾ ವನ್ನು ಪಾನ್ ಮಸಾಲಾ ಕಂಪನಿಗಳು ಖರೀದಿಸುತ್ತವೆಯಂತೆ.
ದಶಕದ ಬೆಳೆ:
ಕೇಸರಿ ಬೆಳ್ಳುಳ್ಳಿ ಗಡ್ಡೆಯ ಹಾಗಿರುವ ಗಡ್ಡೆ ಸಸ್ಯ. ಎರಡು ಮೂರು ಗಡ್ಡೆಗಳು ಒಟ್ಟೊಟ್ಟಿಗೇ ಇರುತ್ತವೆ. ಗೆಣಸು ಬೆಳೆಯುವ ಹಾಗೆ ಏರು ಮುಡಿ ಮಾಡಿ ಗಡ್ಡೆಗಳನ್ನು ನೆಡಬೇಕು. ನಾಲ್ಕು ಬೆರಳು ಕೆಳಗೆ ಹುಡಿಯಾದ ಮಣ್ಣಿನಲ್ಲಿ ನೆಡಬೇಕು.
ಒಮ್ಮೆ ನೆಟ್ಟರೆ ಏಳೆಂಟು ವರ್ಷ ಗಡ್ಡೆ ಅಲ್ಲೇ ಇರುತ್ತದೆ. ಅದೇ ಗಡ್ಡೆ ಬೇಸಿಗೆ ಬಂದ ಮೇಲೆ ಮತ್ತೆ ಚಿಗುರೊಡೆಯುತ್ತದೆ. ಒಂದಿಷ್ಟು ಸತ್ತು ಹೋದ ಗಡ್ಡೆಗಳನ್ನು ಹುಡುಕಿ ಬೇರೆಯದನ್ನು ನೆಡಬೇಕು. ಆದರೆ ಮೊದಲೇ ಹೆಚ್ಚು ಕೆಲಸಗಾರರನ್ನು ಬೇಡುವ ಬೆಳೆ ಇದಾದ್ದರಿಂದ ಆದಷ್ಟು ನೆಡುವ ಕೆಲಸ ಉಳಿಯುತ್ತದೆ ಎಂದು ರೈತರು ಮತ್ತೆ ಮತ್ತೆ ಗಡ್ಡೆಗಳನ್ನು ಕಿತ್ತು ನೆಡುವುದಿಲ್ಲ ಎನ್ನುತ್ತಾರೆ ಭಟ್.
ಜೂನ್ ತಿಂಗಳಲ್ಲಿ ಒಮ್ಮೆ ಝೌನ್ ಮಾಡಬೇಕು. ಆತ ಹೇಳುವ ಪ್ರಕಾರ ಅದು ’ಹೂಟೆ’ ಆಗಿರಬೇಕು. ಈತ ಹೇಳಿದ್ದು ಕಾಶ್ಮೀರಿ ಮಿಸ್ರಿತ ಹಿಂದಿಯಲ್ಲಿ. ನನಗೆ ಸರಿಯಾಗಿ ಅರ್ಥವಾಗಿಲ್ಲ. ಝೌನ್ ಮಾಡುವುದರಿಂದ ಗಡ್ಡೆಗಳ ನಡುವೆ ಮಣ್ಣು ಸಡಿಲವಾಗಿ, ಗಾಳಿಯಾಡುವಂತಾಗುತ್ತದೆ. ಅದರಿಂದ ಹೆಚ್ಚು ಮರಿ ಗಡ್ಡೆಗಳು ಬರುತ್ತವೆಯಂತೆ. ಇಲ್ಲದಿದ್ದರೆ ವರ್ಷ ವರ್ಷ ಬೆಳೆ ಕಡಿಮೆಯಾಗುತ್ತದೆ.
ನಂತರ ಸಪ್ಟೆಂಬರಿನಲ್ಲಿ ಕಳೆ ತೆಗೆದು ನೀರು ಬಸಿದು ಹೋಗುವ ಹಾಗೆ ನೊಡಿಕೊಳ್ಳಬೇಕು. ಅಕ್ಟೋಬರಿನಲ್ಲಿ ಒಮ್ಮೆಲೆ ಗಡ್ಡೆ ಚಿಗುರಲು ಪ್ರಾರಂಭಿಸುತ್ತದೆ. ಒಂದೇ ತಿಂಗಳಿನಲ್ಲಿ ಹೂವು ಅರಳುತ್ತದೆ. ಅಕ್ಟೋಬರ್ ಕೊನೆಯಲ್ಲಿ ಹೂ ಕೊಯ್ದು, ನಂತರ ಇನ್ನೊಮ್ಮೆ ಹೂಟೆ ಮಾಡಿ, ಗೊಬ್ಬರ ಹಾಕಿದರೆ ಆಯಿತು. ಈ ಬಾರಿ ಕಬ್ಬಿಣದ ನೇಗಿಲು ಉಪಯೋಗಿಸಿ ಹೆಚ್ಚು ಆಳಕ್ಕೆ ಹೂಟೆ ಮಾಡಬೇಕು. ಗೊಬ್ಬರ ಮಣ್ಣಿನೊಂದಿಗೆ ಸೇರಬೇಕು. ನವೆಂಬರ್ ಡಿಸೆಂಬರಿನಲ್ಲಿ ಹಿಮ ಬೀಳಲು ಪ್ರರಂಭವಾಗುತ್ತದೆ ನಂತರ ಮುಂದಿನ ಜೂನ್ ವರೆಗೆ ಗಡ್ಡೆ ಪ್ರಿಜ್ ನಲ್ಲಿ ಇರುತ್ತದೆ ಎಂದು ನಗುತ್ತಾನೆ ನೂರ್ ಮುಹಮ್ಮದ್ ಅಜ್ಜ.
ಎನಾದರೂ ದೇವರು ಕೊಟ್ಟರೆ ಮಾತ್ರ ಸಿಗೋ ಬೆಳೆ ಇದು. ವಾತಾವರಣದಲ್ಲಿ ಹೆಚ್ಚು ಕಡಿಮೆ ಆದರೆ ಬೆಳೆನೂ ಏರುಪೇರು.
ಗುಡ್ಡ ಅಗೆದು ಇಲಿ ಹುಡುಕಿದ ಹಾಗೆ:
ಹೊಲದಿಂದ ಇಡೀ ಹೂವನ್ನೇ ಕೊಯ್ಯುತ್ತಾರೆ. ಮನೆಗೆ ತಂದು ಕೇಸರಿ ಬೇರ್ಪದಿಸಬೇಕು. ಒಂದು ಕೇಸರಿ ಹೂವಿನಲ್ಲಿ ಮೂರು ಕೇಸರಿ ಕುಸುಮಗಳನ್ನು ಬೇರ್ಪಡಿಸಬೇಕು. ಆ ಕುಸುಮದ ಬುಡ ಭಾಗವನ್ನು (ಲಚ್ಚಾ) ಬೇರೆ ಕತ್ತರಿಸಿ, ಒಣಗಿಸಬೇಕು. ಒಣಗಿದ ನಂತರ ನೀರಿನಲ್ಲಿ ಅದ್ದಿ ತೆಗೆದು ಬಟ್ಟೆಯಲ್ಲಿ ಸುತ್ತಿ ನಾಲ್ಕು ಘಂಟೆ ಇಡುತ್ತಾರೆ. ನಂತರ ಗ್ರೇಡಿಂಗ್ ಮಾಡಿ ಮತ್ತೆ ಒಣಗಿಸುತ್ತಾರೆ. ಒಂದು ಕ್ವಿಂಟಾಲ್ ಹೂವು ಕೊಯ್ದರೆ ಒಂದು ಒಂದುವರೆ ಕೇಜಿ ಒಣಗಿದ ಕೇಸರಿ ದೊರೆಯುತ್ತದೆಯಂತೆ.
ಒಂದು ಎಕರೆಗೆ ಒಂದು ಕೇಜಿ ಕೇಸರಿ ಬಂದರೆ ಅದೇ ಒಳ್ಳೆ ಬೆಳೆ.
ಇಸ್ಮಾಯಿಲ್ ಭಟ್ ಹೇಳುವ ಲೆಕ್ಕಾಚಾರ ಕೇಳಿ. ಒಂದು ಹೆಕ್ಟೇರ್ ಕೇಸರಿ ಬೆಳೆಯಲು ೫೦೦ ರಿಂದ ೬೦೦ ಮಾನವ ದಿನ ಬೇಕಂತೆ. ೧೬೦ ಆಳು ಕಳೆ ತೆಗೆಯಲು, ಗಡ್ಡೆ ನೆಡಲು ೮೦ ಆಳು, ಹೂಟೆ ಮಾಡಲು ೧೨೦ ಆಳು, ಹೂ ಕೊಯ್ದು, ಕುಸುಮ ಬೇರ್ಪಡಿಸಿ, ಒಣಗಿಸಿ, ಗ್ರೇಡಿಂಗ್ ಮಾಡಲು ೧೨೦ ಮಾನವ ದಿನ ಬೇಕಂತೆ.
ಒಂದು ಕ್ವಿಂಟಾಲ್ ಹೂವುಗಳಲ್ಲು ಕೊಯ್ದರೆ ಒಂದು ತೊಲೆ ಕೇಸರಿ ಸಿಗುತ್ತದೆಯಂತೆ. ಒಂದು ಕ್ವಿಂಟಾಲಿಗೆ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಹೂವು ಬೇಕಂತೆ. ಅಷ್ಟೆಲ್ಲ ಲೆಕ್ಕ ಕೇಳುವಾಗ ಪಕ್ಕದಲ್ಲಿದ್ದ ಹೆಂಡತಿ ಹೇಳಿದ್ದು ’ಇದು ನಮಗೆ ಆಗೋ ಕೃಷಿಯಲ್ಲ’ ಎಂದು.
ಆದ್ರೂ ಒಂದಿಷ್ಟು ಗಡ್ಡೆ ಕೊಡು ಎಂದು ಕೇಳಿ ತೆಗೆದುಕೊಳ್ಳಲು ಮರೆಯಲಿಲ್ಲ.
ಮನೆ ಮಂದಿಯೆಲ್ಲರ ರಜಾ ದಿನದ ಕೆಲಸ:
ಕೇಸರಿ ಹೂ ಕೀಳಲು ಕೂಲಿಕಾರ್ಮಿಕರು ಹೆಚ್ಚು ಬೇಕು. ಹೆಚ್ಚಾಗಿ ಮನೆಯವರೇ ಈ ಕೆಲಸ ಮಾಡುತ್ತಾರೆ. ಈ ವರ್ಷ ಈದ್ ಹಬ್ಬದ ಸಮಯದಲ್ಲೇ ಹೂ ಕೊಯ್ಲಿಗೆ ಬಂದಿದೆ. ಹಾಗಾಗಿ ಹೊರಗಡೆ ನೌಕರಿ ಇದ್ದವರೆಲ್ಲ ಊರಿಗೆ ಬಂದಿದ್ದಾರೆ. ಉಧಂಪುರ ದಲ್ಲಿ ರೇಲ್ವೆ ಇಲಾಖೆಯಲ್ಲಿ ನೌಕರಿ ಇರುವ ಮುಹಮ್ಮದ್ ಘನಿ ಭಟ್ ಸಹ ಹೊಲದಲ್ಲಿ ಹೂ ಕೀಳುತ್ತಿದ್ದರು. ಕೇಸರಿ ಸಿಕ್ಕಾಪಟ್ಟೆ ಕೆಲಸಗಾರರನ್ನು ಬೇಡುವ ಕೃಷಿ. ಎಲ್ಲ ಸೇರಿ ಕೊಯ್ಯುತ್ತಿರುವುದರಿಂದ ಹೊರಗಿನ ಕೂಲಿಕಾರ್ಮಿಕರಿಗೆ ಕೊಡುವ ಹಣ ಸ್ವಲ್ಪ ಉಳಿಯುತ್ತದೆ. ಹಾಗಾಗಿ ಸ್ವಲ್ಪ ಲಾಭವಾಗಬಹುದು ಎನ್ನುತ್ತಾರೆ. ಎಕರೆಗೆ ಒಂದು ಕೆಜಿ ಸಿಕ್ಕರೆ, ಸುಮಾರು, ಎರಡುವರೆಯಿಂದ ಮೂರು ಲಕ್ಷ ರೂಪಾಯಿ ಬರುತ್ತದೆ. ಮನೆಯವರೇ ಎಲ್ಲ ಕೆಲಸ ಮಾಡುವುದರಿಂದ ಈ ಹಣದಲ್ಲಿ ಬದುಕಬಹುದು. ಎಲ್ಲ ರೈತರೂ ಚಿಕ್ಕ ಹಿಡುವಳಿ ದಾರರೇ. ಒಂದೆಕರೆಗಿಂತ ಹೆಚ್ಚು ಭೂಮಿ ಇರುವ ರೈತರ ಸಂಖ್ಯೆ ಕಡಿಮೆ. ವರ್ಷಕ್ಕೆ ಎರಡು ಎರಡು ಮೂರು ಲಕ್ಷ ಒಟ್ಟೂ ಆದಾಯ ಬರುತ್ತದೆ ಎನ್ನುತ್ತಾರೆ.
ಮರೆಯಾಗುತ್ತಿರುವ ಬೆಳೆ:
ಕೇಸರಿ ಬೆಳೆ ದಿನೇ ದಿನೇ ಕಡಿಮೆ ಆಗುತ್ತಿದೆಯಂತೆ. ಎಲ್ಲಡೆಯ ಹಾಗೆ ರೈತರ ಬವಣೆ ಒಂದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಗಳಿಗೇ ಹೆಚ್ಚು ಲಾಭ. ರೈತರಿಗೆ ಬೆಳೆಯ ಕರ್ಚಿಗಿಂತ ಕಡಿಮೆ ಆದಾಯ. ನೂರ ಮಹಮ್ಮದ್ ಭಟ್ ಹೇಳುವಹಾಗೆ ಒಂದು ಕನಾಲ್ ಕೇಸರಿ ಬೆಳೆ ಬೆಳೆಯಲು ಏನಿಲ್ಲ ಎಂದರೂ ಹೈದಿನೈದು ಸಾವಿರ ರೂಪಾಯಿ ಬೇಕು. ಕಳೆದ ವರ್ಶ ಅವರಿಗೆ ಬಂದ ಆದಾಯ ಕನಾಲಿಗೆ ೧೩ ಸಾವಿರ ರೂಪಯಿ. ನಿಕ್ಕಿ ಎರಡು ಸಾವಿರ ನಷ್ಟ!. ಆದರೆ ಈ ವರ್ಷ ಬೆಳೆ ಚನ್ನಾಗಿದೆ ಎನ್ನಲು ಮರೆಯಲಿಲ್ಲ.
ಸರಕಾರಿ ಇಲಾಖೆಗಳ ಅಂಕಿ ಸಂಖ್ಯೆಯೂ ಅದನ್ನೇ ಹೇಳುತ್ತದೆ. ಕಳೆದ ಒಂದು ದಶಕದಲ್ಲಿ ಬೆಳೆಯುವ ಪ್ರದೇಶ ಐದೂವರೇ ಸಾವಿರ ಹೇಕ್ಟೇರು ಪ್ರದೇಶಗಳಿಂದ ಮೂರು ಸಾವಿರ ಹೇಕ್ಟೇರು ಪ್ರದೇಶಕ್ಕೆ ಇಳಿದಿದೆಯಂತೆ.
ಅದನ್ನೇ ಇನ್ನೊಬ್ಬ ಕೃಷಿಕ ಇಸ್ಮಾಯಿಲ್ ಭಟ್‌ಗೆ ಕೇಳಿದರೆ, ’ಎಲ್ಲ ಸುಳ್ಳು. ಎಷ್ಟೊಂದು ಹೊಸ ಪ್ರದೇಶದಲ್ಲಿ ಹೊಸದಾಗಿ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ. ಬಹುಷಹ ಸೇಬು ಬಿಟ್ಟರೆ ಕೇಸರಿಯೇ ಹೆಚ್ಚು ಜನಪ್ರಿಯ ಬೆಳೆ. ಆರೆಂಟು ವರ್ಷಕ್ಕೆ ಒಮ್ಮೆ ಕೇಸರಿ ಗಡ್ಡೆ ಕಿತ್ತು ಅಲ್ಲಿ ಗೋಧಿ ಅಥವಾ ಭತ್ತ ಬೆಳೆಯುವುದು ಅನಿವಾರ್ಯ. ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಹಾಗೆ ಮಾಡದಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಆದರೆ ಕೇಸರಿ ಮತ್ತೆ ಬಂದೇ ಬರುತ್ತದೆ’ ಎನ್ನುತ್ತಾರೆ.
ಬೆಲೆ ಕಡಿಮೆಯಾಗಿದ್ದು ಕೇಸರಿ ಬಗ್ಗೆ ರೈತರ ಆಸಕ್ತಿ ಕಡಿಯಾಗಲು ಪ್ರಮುಖ ಕಾರಣ. ಆದರೆ ಬೆಲೆ ಕಡಿಮೆ ಆಗಲು, ವ್ಯಾಪಾರಸ್ಥರ ಡೋಂಗಿ ವ್ಯವಹಾರವೇ ಕಾರಣ ಎನ್ನುತ್ತಾರೆ ಇಂತಿಹಾಜ್ ಭಟ್.
ವ್ಯಾಪಾರಸ್ಥರು ಏನೇನೋ ಸೇರಿಸಿ ಮಾರುತ್ತಾರೆ. ಬೆಲೆ ಇಳಿಯಲು ವಿದೇಶದಿಂದ ವಿಶೇಷವಾಗಿ ಇರಾನಿನಿಂದ ಆಮದಾಗುತ್ತಿರುವುದು, ಕೃತಕ ಕೇಸರಿಯ ಬಳಕೆ ಮೊದಲಾದ ಕಾರಣಗಳಿವೆ ಎನ್ನುತ್ತಾರೆ ಇಂತಿಹಾಜ್.
ಇತರ ಹೂವುಗಳ, ವಿಶೇಷವಾಗಿ ಜೋಳದ ಸಣ್ಣ ಕುಸುಮಗಳಿಗೆ ಕೃತಕ ಕೇಸರಿ ಬಣ್ಣ ಹಚ್ಚಿ ನಿಜ ಕೇಸರಿಯೊಂದಿಗೆ ಕಲಬೆರಕೆ ಮಾಡಿ ಮಾರುತ್ತಾರಂತೆ.
ಒಮ್ಮೆ ನೆಟ್ಟ ಕೇಸರಿ ಗಡ್ಡೆ ಅದೇ ಹೊಲದಲ್ಲಿ ಎಂಟು ಹತ್ತು ವರ್ಷ ಇರುತ್ತದೆ. ಆದರೆ ಹೀಗೆ ಮಾಡುವುದರಿಂದಲೇ ಇಳುವಳಿ ಕಡಿಮೆಯಾಗುತ್ತದೆ ಎನ್ನುತ್ತವೆ ಸರಕಾರಿ ಇಲಾಖೆಗಳ ಜಾಲತಾಣಗಳು. ಪ್ರತಿ ವರ್ಷ ಜೂನ್ ಮೊದಲವಾರದಲ್ಲಿ ಹೊಸದಾಗಿ ನೆಟ್ಟು ಬೆಳೆದರೆ ಹೆಚ್ಚು ಇಳುವರಿ ಸಾಧ್ಯ ಎನ್ನುತ್ತವೆ ಅಂತರ್ಜಾಲದ ಮಾಹಿತಿ. ಆದರೆ ಅದಕ್ಕೆ ಬೇಕಾಗುವ ಕಾರ್ಮಿಕರ ಸಂಖ್ಯೆ ನೆನಪಿಸಿದರೆ, ಈ ಸರಕಾರಿ ಲೆಕ್ಕ ಬರೀ ಲೆಕ್ಕ ರೈತ ಸ್ನೇಹಿ ಅಲ್ಲ ಅಂದೆನಿಸುತ್ತದೆ.
ಬಹು ಉಪಯೋಗಿ ಕೇಸರಿ:
ಕಾಶ್ಮೀರಿಗಳು ಕೇಸರಿಯನ್ನು ಹಲವಾರು ರೀತಿಯಲ್ಲಿ ಉಪಯೋಗಿಸುತ್ತಾರೆ. ಎಲ್ಲರ ಬಾಯಿಯೂ ಹಳದಿಯಾಗಿರುತ್ತದೆ. ಪಾನ್ ಎಂದರೆ ಅಡಿಕೆ ಹಾಕಿದ್ದನ್ನು ನೋಡಿದ್ದಿಲ್ಲ. ಕೇಸರಿ ಸಂಗಡ ಮತ್ತೇನನ್ನೋ ಸೇರಿಸಿ ತಿನ್ನುತ್ತಾರೆ. ಕಾಶ್ಮೀರಿಯರ ಜನಪ್ರಿಯ ಪೇಯ ಖಾವ್ವಾ. ಕೇಸರಿ, ಯಾಲಕಿ, ಲವಂಗ, ದಾಲ್ಚಿನ್ನಿ ನೀರಿಗೆ ಹಾಕಿ, ಕಾಯಿಸುತ್ತಾರೆ. ಅದಕ್ಕೆ ಸಣ್ಣಗೆ ಕತ್ತರಿಸಿದ ಬಾದಾಮಿಯ ಬಾದಾಮಿಯ ಚೂರುಗಳನ್ನು ಹಾಕಿ ಕೊಡುತ್ತಾರೆ. ಕಾಶ್ಮೀರದ ಛಳಿಗೆ , ದೇಹ ಬೆಚ್ಚಗಿಡಲು ಇದು ಒಳ್ಳೆಯ ಮದ್ದಂತೆ. ಕೇಸರಿಯ ಔಷಧ ಗುಣಗಳ ಪಟ್ಟಿಯನ್ನೇ ನೀಡುತ್ತಾನೆ, ನೂರ್ ಮಹಮ್ಮದ್ ಭಟ್.
ನಾವು ಮಾತನಾಡಿಸಿದ ಬಹುತೇಕ ರೈತರ ಹೆಸರು ಭಟ್ ಎಂದೇ. ಇತಿಹಾಸದ ಯಾವುದೋ ಕಾಲಘಟ್ಟದ ಬದಲಾವಣೆ. ತಿರುಗಿ ಹೊರಡುವಾಗ, ’ನಾನೂ ರೈತ, ನಮಗೂ ನಾಲ್ಕು ಗಡ್ಡೆ ಕೊಡುತ್ತೀರಾ?’ ಎಂದಿದ್ದಕ್ಕೆ ಐವತ್ತು ಗಡ್ಡೆ ಕಿತ್ತು, ನನ್ನ ಕಯಲ್ಲಿಟ್ಟು ’ನೆಡೋದು ನಮ್ಮ ಕೆಲಸ. ಮುಂದಿಂದು ಖುದಾನ ಇಚ್ಚೆ ಒಳ್ಳೇದಾಗಲಿ’ ಎಂದ.
ದಾರಿಯಂಚಿನ ಅಂಗಡಿ:
ಹೆದ್ದಾರಿಯಂಚಿನಲ್ಲಿ ಸಣ್ಣ ಅಂಗಡಿ ಹಾಕಿ ಅಲ್ಲೇ ತಾನು ಬೆಳೆದ ಕೇಸರಿಯನ್ನು ಮಾರುತ್ತಾನೆ ನೂರ್ ಮಹಮ್ಮದ್ ಭಟ್. ಚಿಕ್ಕ ಅಂಗಡಿ. ಅಲ್ಲೇ ಕೆಸರಿಯ ಹೂವುಗಳನ್ನಿಟ್ಟು ಕೇಸರಿ ಬೆಳೆ ಬಗ್ಗೆ ಹೇಳುತಿದ್ದ. ಅದು ಆತನ ತಾತನ ಕಾಲದಿಂಡ ಬಂದ ಹೊಲವಂತೆ. ಇವನು ಬೆಳೆಗಿಂತ ಮಾರುವುದರಲ್ಲೇ ಹೆಚ್ಚು ಬ್ಯುಸಿ. ಗ್ರಾನಿಗೆ ಐವತ್ತರಿಂದ ನೂರೈವತ್ತರವರೆಗೆ ವಿವಿಧ ಗುಣಮಟ್ಟದ ಕೇಸರಿ.
ಪಹಲ್ಗಾಂ ಊರಿಗೆ ಹೋದವರು ಪ್ರವಾಸಿಗರು ಹೋಗುವ ತಾಣಕ್ಕೆ ಹೋಗದೆ, ಹಳ್ಳಿ ಸುತ್ತಾಡುತ್ತಿದ್ದೆವು. ಕುಸುಮಾ ಹೂವಿನ ಗಿಡ ಹುಡುಕುತ್ತಿದ್ದಳು. ಅವಳ ಚೀಲದಲ್ಲಿ ಹೂವಿನ ಗಿಡಗಳು, ಬೀಜಗಳಿಂದ ತುಂಬುತ್ತಲೇ ಇತ್ತು. ರಿಟರ್ನ್ ಟಿಕೆಟ್ ಇಲ್ಲದೇ ಬಂದಿದ್ದು ಒಳ್ಳೆಯದೇ ಆಗಿತ್ತು. ವಿಮಾನದಲ್ಲಿ ಇವನ್ನೆಲ್ಲ ತೆಗೆದುಕೊಂಡು ಸೆಕ್ಯುರಿಟಿ ಚೆಕ್ ನವರಿಗೆ, ಕಸ್ಟಮ್ಸ್ ನವರಿಗೆ ಉತ್ತರ ಕೊಡೋದು ಕಷ್ಟ ಇತ್ತು. ಯಾವುದೋ ಸಿಕ್ಕ ಟ್ರೇನಿಗೆ ಲೊಕಲ್ ಟಿಕೆಟ್ ಖರೀದಿ ಹಿಂತಿರುಗುವ ಯೋಜನೆ ಮಾಡಿದ್ದೆವು. ಕಾಶ್ಮೀರದಲ್ಲಿ ನಮ್ಮ ಪ್ರಿ ಪೇಡ್ ಮೊಬೈಲ್ ನಿಂದ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಿಟರ್ನ್ ಟಿಕೆತ್ ಬುಕ್ ಮಾಡಲೂ ಸಾಧ್ಯವಾಗಲಿಲ್ಲ.
ಸೇಬು ಕೃಷಿ:
ನಮ್ಮ ಆಸಕ್ತಿ ಪ್ರವಾಸಿ ತಾಣವಲ್ಲ ಕೃಷಿ ಎಂದು ನಮ್ಮ ವಾಹನ ಚಾಲಕನಿಗೆ ಆಗಲೇ ಮನವರಿಕೆಯಾಗಿತ್ತು. ಹಿಂತಿರುಗಿ ಬರುವಾಗ ಮುಖ್ಯ ರಸ್ತೆ ಬಿಟ್ಟು ಹಳ್ಳಿ ದಾರಿ ಹಿಡಿದ. ಹಳ್ಳಿ ಮೂಲೆ ಮೂಲೆ ಸುತ್ತಿಸಿ, ಸೇಬು ತೋಟಗಳೇ ತುಂಬಿದ ಊರಿಗ ಬಂದ. ಉಳಿದ ಭಾಗದಲ್ಲಿ ಆಗಲೇ ಸೇಬು ಕೊಯ್ದು ಮುಗಿದಿತ್ತು. ಆದರೆ ಈ ಊರಿನಲ್ಲಿ ಸೇಬು ಇನ್ನೂ ಮರದ ಮೇಲಿತ್ತು. ಮರದ ಮೇಲಿದ್ದ ಸೇಬು ನೋಡಿ ಮತ್ತೆ ಅಲ್ಲೇ ಗಾಡಿ ನಿಲ್ಲಿಸಿ ತೊಟ ಸುತ್ತಾಡತೊಡಗಿದೆವು. ೧೫ ೧೫ ಅಡಿ ಅಳತೆಯಲ್ಲಿ ಗಿಡಗಳು. ಒಂದು ಗಿಡದಲ್ಲಿ ಐದಾರು ನೂರು ಕಾಯಿಗಳು. ತೋಟದ ಮಧ್ಯದಲ್ಲಿ ಹುಕ್ಕಾ ಸೇದುತ್ತ ಕುಳಿತಿದ್ದ ರೈತ.
ಹೂವ ತೋರಿಸಿ ಗಡ್ಡೆ ಮಾರುವವ:
ಶ್ರೀನಗರದ ಪ್ರಸಿದ್ದ ಸ್ಥಳ ದಾಲ್ ಸರೋವರ. ನಲವತ್ತು ಕಿಲೋಮೀಟರ್ ಕ್ಕಿಂತಲೂ ಹೆಚು ಸುತ್ತಳತೆ ಇರುವ ಈ ಕೆರೆ ಪ್ರವಾಸಿಗರ ಪ್ಪ್ರಮುಖ ಆಕರ್ಷಣೆ.
ಈ ಕೆರೆ ಒಂದರ್ಥದಲ್ಲಿ ನಗರದೊಳಗಿನ ನಗರವೇ ಸರಿ. ಈ ಕೆರೆಯಲ್ಲಿ ತೇಲುವ ಬೋಟ್ ಹೌಸ್ ಗಳಿವೆ. ಇವೇ ಅತಿಥಿಗೃಹಗಳು ಕೂಡ. ಐಶಾರಾಮಿ ಹೊಟೆಲುಗಳಂತೆ ಶೃಂಗರಿಸಿಕೊಂಡ ಇಂತ ಬೋಟ್ ಹೌಸ್‌ಗಳಲ್ಲೇ ಪ್ರವಾಸಿಗರು ಉಳಿಯುತ್ತಾರೆ. ಕೆರೆಯ ಮಧ್ಯೆ ತೇಲುವ ಸಂತೆ, ತೇಲುವ ಹೋಟೆಲು, ಕಾಶ್ಮೀರಿ ಘ್ರುಹ ಕೈಗಾರಿಕೆಗಳ ಅಂಗಡಿಗಳು, ತೇಲುವ ತರಕಾರಿ ತೋಟ, ಹೂವಿನ ತೋಟ, ಹೀಗೆ ಏನೆಲ್ಲ ಇದೆ. ಅದೇ ಒಂದು ಬೇರೆಯ ಲೋಕ.
ಕೆರೆಯಲ್ಲಿ ಸುತ್ತಾಡಲು ಸಣ್ಣ ಸಣ್ಣ ದೋಣಿಗಳಿಗಳಿವೆ. ಇಲ್ಲಿ ಇವುಗಳನ್ನು ಶಿಕಾರಾ ಎಂದು ಕರೆಯುತ್ತಾರೆ.
ಅಂಥ ಒಂದು ಸಣ್ಣ ಶಿಕಾರದ ಮೇಲೆ ಕುಳಿತು ನಾವೂ ಕೆರೆಯೊಳಗಿನ ನಗರದ ಶಿಕಾರಿಗೆ ಹೊರಟಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಒಬ್ಬ ಸಣ್ಣ ದೋಣೊಯಲ್ಲಿ ಒಬ್ಬ ಬಣ್ಣ ಬಣ್ಣದ ಹೂವುಗಳ ಅಂದವಾಗಿ ಇಟ್ಟುಕೊಂಡು ಸುತ್ತಾಡುತ್ತಿದ್ದ. ಕುಸುಮಾ ಹೂವನ್ನು ಉದ್ದ ಕತ್ತು ಮಾಡಿ ನೋಡಿದ್ದೇ ತಡ. ಆತನ ಶಿಕಾರ ನಮ್ಮ ಹತ್ತಿರವೇ ಬಂತು. ಯಾವ ಹೂವಿನ ಗಡ್ಡೆ ಬೇಕು ಎಂದ. ಹೂವು ಮಾರುವವನಾಗಿರಲಿಲ್ಲ. ಆದರೆ ಹೂವನ್ನು ತೋರಿಸಿ ಗಡ್ಡೆ ಮಾರುವವನಾಗಿದ್ದ. ಶಿಕಾರಾದಲ್ಲಿ ಬಣ್ಣ ಬಣ್ಣದ ಹೂವುಗಳನ್ನು ತೋರಿಸಿ, ಆ ಹೂವಿನ ಗಡ್ಡೆ ಕೊಡು ಎಂದು ಕುಸುಮಾ ಹೇಳುತ್ತಿದ್ದಳು. ಈತ ತನ್ನ ಚೀಲದಿಂದ ಗಡ್ಡೆ ತೆಗೆದು ಕೊಡುತ್ತಿದ್ದ. ಯಾವ ಹೂವು ಯಾವ ಗಡ್ಡೆಯದೋ!, ದೇವರೇ ಬಲ್ಲ. ನಾನಂತೂ ಕಳೆ ಗಿಡ ಆಗದಿದ್ದರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದೆ.
ದೇವರ ಕಾಯುವ ಮಿಲಿಟರಿ ಪಡೆ: ದೇವಸ್ಥಾನಗಳು ಇರುವುದೇ ಕಡಿಮೆ. ಇದ್ದಲ್ಲೂ ಸಿ. ಆರ್. ಪಿ.ಎಫ್ ಪಡೆಗಳ ಬಿಗಿ ಪಹರೆಯಲ್ಲಿ ದೇವಾಲಯವನ್ನು ಸುತ್ತುವರೆದಿರುತ್ತವೆ.