ಕೄಷಿ

Saturday, October 30, 2010

ಸಂರಕ್ಷಣೆಯ ಹಾದಿ

ನನಗಿನ್ನೂ ನೆನಪಿದೆ; ನಮ್ಮ ಮನೆ ಅಂಗಳದಲ್ಲಿ ಪ್ರತಿದಿನ ಬಂದು ನಿಲ್ಲುತ್ತಿದ್ದ ಆ ಜೀಪು. ನಾನಾಗ ತುಂಬಾ ಸಣ್ಣವನಿದ್ದೆ. ಶಾಲೆಗೆ ಸಹ ಹೋಗುತ್ತಿರಲಿಲ್ಲ. ಆ ಜೀಪಿಗಾಗಿ ನಾನು ಕಾತರದಿಂದ ಕಾಯುತ್ತಿದ್ದೆ. ಕಾರಣ ಮತ್ತೇನಲ್ಲ; ಆ ಜೀಪಿನ ಡ್ರೈವರ್ ನನಗೆ ಚಾಕೊಲೇಟ ತರುತ್ತಿದ್ದ. ಒಂದು ದಿನ ಆ ಜೀಪನ್ನು ದಾರಿಯಲ್ಲಿ ಅಡ್ಡಗಟ್ಟಿ ಜನರೆಲ್ಲ ಪ್ರತಿಭಟಿಸುತ್ತಾರೆ ಎಂದಾಗ ನನಗೆ ಪಿಚ್ಚೆನಿಸಿತ್ತು.


ಜೀಪು ಅಘನಾಶಿನಿ ಕಣಿವೆಯಲ್ಲಿ ಜಲ ವಿದ್ಯುತ ಯೋಜನೆಗೆ ಸರ್ವೆ ಮಾಡಲು ಬರುವ ಅಧಿಕಾರಿಗಳದ್ದಾಗಿತ್ತು. ನಮ್ಮ ಮನೆ ಹತ್ತಿರವೇ ಅಘನಾಶಿನಿ ಯೋಜನೆಯ ವಿದ್ಯುತ ಘಟಕ ಯೋಜಿತವಾಗಿದ್ದರಿಂದ ತುಂಬಾ ದಿನಗಳವೆರೆಗೆ ಸರ್ವೆ ಕಾರ್ಯ ನಡೆಯುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಇರುವ ಮತ್ತು ಪ್ರಸ್ತಾಪಿಸಲಾದ ಯೋಜನೆಗಳು

ಬೇಡ್ತಿ ಅಘನಾಶಿನಿ ಯೋಜನೆಗಳು ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡದ ಜನರನ್ನು ಕಾಡುತ್ತಿರುವ ಸಮಸ್ಯೆ. ತೀರ ಇತ್ತೀಚೆಗೆ ಸಹ ಮತ್ತೆ ಪ್ರಸ್ತಾಪವಾಗಿತ್ತು. ಈ ಪ್ರದೇಶದ ಸರಿ ಸುಮಾರು ಎರಡು ತಲೆಮಾರು ಈ ಯೋಜನೆಗಳ ಭಯದಲ್ಲೇ ಬದುಕಿವೆ. ಎಷ್ಟೊತ್ತಿಗೆ ಊರು ಬಿಟ್ಟು ಹೊರಡಬೇಕಾದ ಪರಿಸ್ಥಿತಿ ಬರಬಹುದೆಂದೆನ್ನುವ ಆತಂಕದಲ್ಲಿ ಕಳೆದಿದ್ದಾರೆ.

ಈಗ ಕಳೆದ ಅಗಷ್ಟ ತಿಂಗಳಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಭಾಗದ ಜನ ನೆಮ್ಮದಿಯ ನಿಟ್ಟಿಸಿರು ಬಿಡುವ ಸುದ್ದಿ ಹೊರ ಬಿದ್ದಿದೆ. ಎಲ್ಲ ಸುಗಮವಾಗಿ ನಡೆದರೆ, ಇನ್ನು ಅಂಥ ಭಾರೀ ಯೋಜೆಗಳು ಪ್ರಸ್ತಾಪವಾಗಲಾರವು ಎನ್ನುವ ಭರವಸೆ ಮೋಡಿದೆ. ಈ ಪ್ರದೇಶವನ್ನು "ಸಂರಕ್ಷಣಾ ವಲಯ " ಎಂದು ಘೋಷಿಸಲು ನಿರ್ಧರಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳು

2007ರಲ್ಲಿ ಸ್ವರ‍್ಣವಲ್ಲಿಯಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಇಡೀ ಉತ್ತರ ಕನ್ನಡವನ್ನು "ಸೂಕ್ಷ್ಮ ಪ್ರದೇಶ" ಎಂದು ಘೋಷಿಸುವ ಬಗ್ಗೆ. ಹಿರಿಯ ಲೇಖಕರಾದ ಶ್ರೀ ನಾಗೇಶ ಹೆಗಡೆಯವರೂ ಸೇರಿದಂತೆ ಹಲವು ವಿಜ್ಞಾನಿಗಳು, ಪರಿಸರಾಕ್ತರು ಆ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ನಮ್ಮ ಕ್ರಿಯಾಶೀಲ ಸಂಸದ ಅನಂತಕುಮಾರ ಹೆಗಡೆಯವರು ಜಿಲ್ಲೆಯನ್ನೇ "ಜೈವಿಕ ಸೂಕ್ಷ್ಮ ಪ್ರದೇಶ (Biosphere Reserve) ಎಂದು ಗುರುತಿಸುವ ಪ್ರಸ್ತಾವೆಯನ್ನು ಸಲ್ಲಿಸಲು ಅಸಕ್ತಿ ತಾಳಿದ್ದರು. ಅದೊಂದು ಒಳ್ಳೆಯ ನಡೆಯಾಗಿತ್ತು. ಆದರೆ ಉತ್ತರ ಕನ್ನಡದಂಥ ಇಡೀ ಜಿಲ್ಲೆಯನ್ನು ಹೀಗೆ ಘೋಷಿಸುವ ಸಾಧ್ಯತೆಗಳು ಕಡಿಮೆ ಇದ್ದವು. ಯುನೆಸ್ಕೋದ ಒಂದು ಯೋಜನೆ ಮಾತ್ರ ಆದ, ಭಾರತದ ಯಾವುದೇ ಕಾನೂನಿನಲ್ಲಿ ಮಾನ್ಯತೆ ಇಲ್ಲದ, ಇಂಥ ಯೋಜನೆ ಅಂತರಾಷ್ಟ್ರೀಯ ಮಟ್ಟದ ಹೆಸರಿಗೆ ಉಪಯುಕ್ತವಾದರೂ, ಇಂಥ ಭಾರೀ ಯೋಜನೆಗಳನ್ನು ನಿಲ್ಲಿಸುವಲ್ಲಿ ನ್ಯಾಯಾಲಯಗಳಲ್ಲಿ ಹೋರಾಡಲು ಶಕ್ಯವಾಗಿಲ್ಲವಾಗಿತ್ತು. ನಾನು ಜಿಲ್ಲೆಯ ಸಂರಕ್ಷಣಾ ಮಹತ್ವದ ೧೦ ಪ್ರಮುಖ ತಾಣಗಳನ್ನು ಆಯ್ಕೆ ಮಾಡಿ, ಈಗಿರುವ ಕಾನೂನುಗಳಡಿಯಲ್ಲಿ, ಸಣ್ಣ ಸಣ್ಣ ಪ್ರದೇಶಗಳನ್ನು ಸಂರಕ್ಷಿಸುವ ಕಾರ‍್ಯ ಹೆಚ್ಚು ಸುಲಭವಾಗಿ ಕಾರ‍್ಯ ಸಾಧ್ಯವೇನೋ ಎಂದಿದ್ದೆ. ಹಾಗೆ ಆಯ್ಕೆ ಮಾಡಿದ ಪ್ರದೇಶಗಳ ನಕ್ಷೆಯನ್ನು ನೋಡಿ.

ಹಾಗಾಗಿ ವನ್ಯ ಜೀವಿ ಸಂರಕ್ಷಣಾ ಕಾನೂನಿನಲ್ಲಿ ೨೦೦೬ರಲ್ಲಿ ೩೬ ಅ ದಂತೆ ಸೇರಿಸಿದ " ಸಂರಕ್ಷಣಾ ವಲಯ" ಎನ್ನುವ ಹೊಸ ವ್ಯವಸ್ಥೆ, ಕಾಡಿನ ಮಧ್ಯದಲ್ಲಿ ಮನುಷ್ಯರು ಬಾಳುತ್ತಿರುವ ನಮ್ಮಂಥ ಪ್ರದೇಶಗಳಿಗೆ ಸೂಕ್ತ. ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನದ ಹಾಗೆ ಮನುಷ್ಯರನ್ನು ಹೊರಗಿಟ್ಟು ಸಂರಕ್ಷಿಸುವುದಕ್ಕಿಂತ ಸ್ಥಳೀಯರೊಂದಿಗಿನ ಸಂರಕ್ಷಣಾ ವ್ಯವಸ್ಥೆ ಇದು.


ನಂತರ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ಅನಂತ ಅಶೀಸರ ಅವರು ಇದನ್ನು ಪ್ರಮುಖ ಕಾರ‍್ಯಕ್ರಮವಾಗಿ ತೆಗೆದುಕೊಂಳ್ಳಲು ಆಸಕ್ತಿ ವಹಿಸಿದರು. ಅರಣ್ಯ ಭವದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನನಗೆ ಮಾತನಾಡಲು ಅವಕಾಶವನ್ನೂ ಒದಗಿಸಿದರು. ವಿಸ್ತ್ರತ ವರದಿ ತಯಾರಿಸುವ ಜವಾಬ್ದಾರಿಯೂ ನನಗೇ ಬಂತು. ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಮನೋಜಕುಮಾರ ಅವರೊಂದಿಗೆ ತಯಾರಿಸಿದ ವರದಿ ಈಗ ವನ್ಯ ಜೀವಿ ಮಂಡಳಿಯಲ್ಲಿ ಅನುಮೋದನೆ ಪಡೆದಿದೆ.

ದಾಂಡೇಲಿಯ ಹಾರ್ನಬಿಲ್ ಸಂರಕ್ಷಣಾ ವಲಯದ ಕಲ್ಪನೆ ಮನೋಜಕುಮಾರ ಅವರದ್ದೇ ಕಲ್ಪನೆ. ನಾನು ಕೇವಲ ನಕ್ಷೆ ತಯಾರಿಸಿ, ಒಂದಿಷ್ಟು ಸಲಹೆ ಕೊಟ್ಟಿದ್ದೆನಷ್ಟೆ. ನಂತರ ವಿಜಯ ಕರ್ನಾಟಕದ ಸಂಪಾದಕರೂ ಈ ಬಗ್ಗೆ ಬರೆದ ಮೇಲೆ ಮತ್ತಷ್ಟು ವೇಗ ಪಡೆಯಿತು.

ಜಿಲ್ಲೆಯ ಬಹುಪಾಲು ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಇನ್ನೂ ಅಳಿದುಳಿದಿರುವ ಒಳ್ಳೆ ಅರಣ್ಯವನ್ನ ಸೇರಿಸಿ, ಬೇಡ್ತಿ ಮತ್ತು ಅಘಾಶಿನಿ ಸಂರಕ್ಷಣಾ ವಲಯಗಳ ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಬಹುಶಃ ಎಲ್ಲರಿಗೂ ನೆನಪಿರಬಹುದು.ಇತ್ತೀಚೆಗೆ ಹಣಕೋಣದಲ್ಲಿ ಉಷ್ಣಸ್ಥಾವರದ ಯೋಜನೆ ನಿಲ್ಲಲು ಪ್ರಮುಖ ಕಾರಣ, ಯೋಜನೆಯ ಪ್ರದೇಶ ಗೋವಾದ ಕೋಟಿಗಾಂವ ಅಭಯಾರಣ್ಯದಿಂದ ಹತ್ತು ಕಿ. ಮೀ. ಒಳಗೇ ಇದೆ ಎನ್ನುವುದು ಎಂದು. ಇಂತ ಸಂರಕ್ಷಣಾ ವಲಯದ ಸುತ್ತಲಿನ ಹತ್ತು ಕಿ. ಮೀ ಒಳಗೆ ಕೂಡ ಯಾವುದೇ ಭೃಹತ ಯೋಜನೆಗಳು ಬರುವ ಹಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಹೋರಾಟಕ್ಕೆ ಒಂದು ತಾತ್ವಿಕ ನೆಲೆ ಇದು. ಮೂವತ್ತು ವರ್ಷಗಳಿಂದ ಎಷ್ಟೊಂದು ಹಿರಿಯರು, ಈ ಹೋರಾಟದಲ್ಲಿ ಬಾಗವಹಿಸಿದ್ದರು. ನಮ್ಮೆಲ್ಲರಲ್ಲಿ ಪರಿಸರ ಕಾಳಜಿ ಹುಟ್ಟಲು ಅವರೆಲ್ಲರ ಕಾಳಜಿಯೇ ಕಾರಣ. ಆ ಎಲ್ಲ ಹಿರಿಯರಿಗೆ ಅಭಿನಂದನೆಗಳು.

***************************************************************

ಅಘನಾಶಿನಿ ಸಂರಕ್ಷಣಾ ವಲಯ:

ಅಘನಾಶಿನಿ ಕಣಿವೆಯ ಉಂಚಳ್ಳಿ ಜಲಪಾತದಿಂದ ಪ್ರಾರಂಭವಾದ ಅಘಾಶಿನಿ ಕಣಿವೆಯ ಎರಡೂ ಪಕ್ಕದ ಕಾಡು, ಗುಡ್ಡೆ ಕೋಟೆ, ನಿಲ್ಕುಂದ ದೇವಿಮನೆ, ವಾಟೆಹಳ್ಳ ಜಲಪಾತ, ಭೀಮನಗುಡ್ಡ, ನಿಶಾನೆ ಗುಡ್ಡ, ಬೆಣ್ಣೆಹೊಳೆ ಕಣಿವೆ, ಬೆಣ್ಣೆಹೊಳೆ ಜಲಪಾತ ಮೊರ್ಸೆ ಊರಿನ ಹಿಂಭಾಗ, ದೊಡ್ಮನೆ ಘಟ್ಟ, ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 96.344 ಚ.ಕಿ.ಮೀ.

ಬೇಡ್ತಿ ಸಂರಕ್ಷಣಾ ವಲಯ:

ಬೆಡ್ತಿ ನದಿ ಕಣಿವೆಯ ಮಾಗೋಡ ಜಲಪಾತದಿಂದ ಪ್ರಾರಂಭವಾಗಿ ಕಣಿವೆಯ ಎರಡೂ ಪಕ್ಕದ ಕಾಡು, ಜೇನು ಕಲ್ಲು ಗುಡ್ಡ ದಿಂದ ಕೆಳಾಸೆ ಗ್ರಾಮದವರೆಗೆ, ಶಹಿವಗಂಗಾ ಜಲಪಾತದಿಂದ, ಕೊಂಕಿ ಕೋಟೆ, ಬಿಳಿ ಹಳ್ಳ ಕಣಿವೆ ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 33.95 ಚ.ಕಿ.ಮೀ.

ಏನಿದು ಸಂರಕ್ಷಣಾ ವಲಯ?

ವನ್ಯ ಜೀವಿ ಸಂರಕ್ಷಣಾ ಕಾನೂನು, 1972, (2006ರ ಸೇರ್ಪಡೆ) 36 ಆ, ದಂತೆ ಘೋಶಿಸಲಾಗುವ, ಈ ಪ್ರದೇಶದ ಸಂರಕ್ಷಣೆಯನ್ನು ಅರಣ್ಯ ಇಲಾಖೆಯೋಮದಿಗೆ ಸ್ಥಳೀಯರನ್ನೂಳಗೊಂಡ ಸಮೀತಿಯು ನಿರ್ವಹಿಸುವುದು.

ಲಾಭಗಳು:
ಕೇವಲ 4 % ಅರಣ್ಯವನ್ನು ಸಂರಕ್ಷಣಾ ವಲಯ ಎಂದು ಘೋಶಿಸುವ ಮೂಲಕ ಜಿಲ್ಲೆಯ ಹೆಚ್ಚಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸಲು ಸಾಧ್ಯ.
ಅರಣ್ಯ ನಾಶವಾಗುವ ಬೃಹತ ಯೋಜನೆಗಳಿಗೆ ಕಡಿವಾಣ
ಜನಜೀವನಕ್ಕೆ ಯಾವುದೇ ಸಮಸ್ಯೆ ಇಲ್ಲ

ವನ್ಯ ಜೀವಿಗಳ ವಲಸೆ ಮಾರ್ಗ ಸುಸ್ಠಿರ

*********************************************************************

8 comments:

jithendra hindumane said...

ನಿಜ . ನಿಮ್ಮ ಬರಹ ಸಕಾಲಿಕವಾಗಿದೆ. ಈ ರೀತಯ ಪ್ರಯತ್ನಗಳಿಂದ ಮಾತ್ರ ಪ್ರಕೃತಿ ಸಂಪತ್ತನ್ನು ಸ್ವಲ್ಪವಾದರೂ ಉಳಿಸಬಹುದೇನೋ?

ರಾಜೇಶ್ ನಾಯ್ಕ said...

ಬಾಲು,
ಸೂಕ್ತ ಮಾಹಿತಿ ನೀಡಿದ್ದೀರಿ. ಈ ಯೋಜನೆಗಳೆಲ್ಲಾ ಕಾರ್ಯಗತವಾಗದಿದ್ದರೆ ಸಾಕು ಎಂದುಕೊಳ್ಳುತ್ತಿದ್ದೆ. ಇಂತಹ ಸಂರಕ್ಷಣಾ ವಲಯಗಳು ಘೋಷಿತಗೊಂಡರೆ ಸ್ವಲ್ಪವಾದರೂ ಕಾಡು ಉಳಿಯಬಹುದು. ಧನ್ಯವಾದಗಳು ಮಾಹಿತಿಗಾಗಿ.

nimmolagobba said...

ಕಣ್ತೆರೆಸುವ ಲೇಖನ . ನಿಮ್ಮ ಆಲೋಚನೆ ಕಾಡಿನ ಬೆಳವಣಿಗೆಗೆ ಪೂರಕವಾಗಿದೆ

ಮನಮುಕ್ತಾ said...

ಉತ್ತಮ ವಿಚಾರದ ಒಳ್ಳೆಯ ಲೇಖನ..

ವಿ.ಆರ್.ಭಟ್ said...

ಲೇಖನ ಮಾಹಿತಿಪೂರ್ಣ !

shivu.k said...

ಸರ್,

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ..ಮತ್ತು ಮಾಹಿತಿಪೂರ್ಣವಾಗಿದೆ..

Narayan Bhat said...

ಸಂತಸದ ಸುದ್ದಿ....ಸಂರಕ್ಷಣೆಯ ಈ ಹಾದಿಯಲ್ಲಿ ನೀವು ಪಾಲ್ಗೊಂಡಿದ್ದು ತಿಳಿದು ಇನ್ನಸ್ಟು ಸಂತೋಷವಾಯ್ತು.

Dandeli-Anshi Tiger Reserve said...

Sir Congratulations and also Thank you for saving Uttara Kannada Bio-diversity.