ಕೄಷಿ

Tuesday, March 17, 2009

ಹೆಜ್ಜೆ ಅಳಿಸಿ ಹೋಗುವ ಮುನ್ನ.........

ಆ ಮಣ್ಣು ರಸ್ತೆಯಲ್ಲಿ ಜೀಪು ಸಾಕಷ್ಟು ವೇಗವಾಗಿಯೇ ಹೋಗುತ್ತಿತ್ತು. ಪಕ್ಕದಲ್ಲಿದ್ದ ಸ್ನೇಹಿತ ಸಂಜಯ್ ಗುಬ್ಬಿ ಹೇಳದೇ ಇದ್ದರೆ ಹತ್ತು ವರ್ಷಗಳಿಂದ ಹುಡುಕುತ್ತಾ ಇದ್ದ ಚಿತ್ರವೊಂದು ತಪ್ಪಿಹೋಗುತ್ತಿತ್ತು. ಥಟ್ಟನೆ ನಿಲ್ಲಿಸಿ ಫೋಟೊ ಹೊಡೆದಿದ್ದ್ದೆ ಹೊಡೆದದ್ದು. ಖುಷಿ ಎಷ್ಟಾಗಿತ್ತೆಂದರೆ, ಮೆಮರಿ ಕಾರ್‍ಡ್ ಖಾಲಿ ಆಗುವ ಹಂತಕ್ಕೆ ಬಂದಿತ್ತು.


ಅಷ್ಟೆಲ್ಲ ಆಸಕ್ತಿಯಿಂದ ಹೊಡೆದ ಫೋಟೊ ಯಾವುದೂ ಅಲ್ಲ. ಒಂದು ಹುಲಿ ಹೆಜ್ಜೆಯದು.

 
ಯಾಕಪ್ಪಾ ಅಷ್ಟೆಲ್ಲ; ನಾಗರಹೊಳೆಗೋ, ಬಂಡೀಪುರಕ್ಕೋ ಹೋಗಿದ್ರೆ ಸುಲಭವಾಗಿ ಸಿಗುತ್ತಿತ್ತು ಅನ್ನಬಹುದು. ಆದರೆ, ಈ ಹೆಜ್ಜೆ ಸಿಕ್ಕಿದ್ದು ದಾಂಡೇಲಿಯಲ್ಲಿ. ಹಾಗಾಗಿ ಅಷ್ಟೆಲ್ಲ ಖುಷಿ ಪಟ್ಟಿದ್ದು.
ನಾನು ದಾಂಡೇಲಿಯ ಕಾಡಿನಲ್ಲಿ ಅಡ್ಡಾಡಲು ಶುರು ಮಾಡಿದ್ದು ಹತ್ತು ವರ್ಷಗಳ ಹಿಂದೆ; ನಗರದ ನೌಕರಿ ಬೇಡ, ಕಾಡು ಸುತ್ತುತ್ತ ಕಾಡಿನೂರಿನಲ್ಲೇ ಬದುಕಬೇಕು ಎಂದು ತಿರುಗಿ ಊರಿಗೆ ಬಂದಾಗಿನಿಂದ ಈ ಕಾಡಿನಲ್ಲಿ ಸುತ್ತಾಡುತ್ತಿದ್ದೇನೆ. ಕಾಡಿನಲ್ಲಿ ಹುಲಿ ಇದೆ ಎನ್ನುವ ಸಾಕ್ಷಿಯಾಗಿ ಆಗಾಗ "ಹಿಕ್ಕೆಗಳು" ಸಿಕ್ಕಿದ್ದವು. ಎಷ್ಟೋ ಬಾರಿ ಇಡೀ ದಿನ ಅಲೆದರೂ ಹುಲಿ ಏಕೆ, ಯಾವ ಕಾಡು ಪ್ರಾಣಿಯ ಕುರುಹೂ ಸಿಗದೇ ಇದ್ದದ್ದೂ ಇದೆ. ಎಲ್ಲೊ ಬೆರಳೆಣಿಕೆಯಷ್ಟು ಬಾರಿ ಮಾತ್ರ ಹೆಜ್ಜೆ ಸಿಕ್ಕಿದ್ದು. ಅದಕ್ಕೆ ಈ ಖುಷಿ.

ದಾಂಡೇಲಿ ಮೊದಲಿನಿಂದಲೂ ಹುಲಿ ಇದ್ದ ಪ್ರದೇಶವೇ! ಬ್ರಿಟಿಷ್ ದಾಖಲೆ ಪ್ರಕಾರ ೧೮೫೬ರಿಂದ ೧೮೬೬ರವರೆಗೆ ೧೫೮ ಹುಲಿಗಳನ್ನೂ, ೧೮೬೭ರಿಂದ ೧೮೭೭ರವೆಗೆ ೩೫೨ ಹುಲಿಗಳನ್ನು, ೧೯೭೮ರಿಂದ ೧೮೮೨ರವರೆಗೆ ೧೩೦ ಹುಲಿಗಳನ್ನ, ಅಂದಿನ ಬ್ರಿಟಿಶ್ ಸರಕಾರ ಅಧಿಕೃತವಾಗಿ ಈ ಭಾಗದಲ್ಲಿ ಕೊಲ್ಲಿಸಿದೆ. ಅಂದರೆ ೨೭ ವರ್ಷದಲ್ಲಿ ೬೪೦ ಹುಲಿಗಳನ್ನು ಕೊಲ್ಲಿಸಲಾಗಿದೆ. ಅದೂ ಬಹುಮಾನ, ಹಣ ಕೊಟ್ಟು.

ಈಗ ಇಡೀ ದೇಶದ ಕಾಡಿನಲ್ಲಿರುವ ಹುಲಿಗಳ ಸಂಖ್ಯೆ ೧೪೧೧!. ಕರ್ನಾಟಕದಲ್ಲಿ ೨೯೦!

ಬರೀ ಒಂದು ಶತಾಮಾನದಲ್ಲಿ ಎಷ್ಟೆಲ್ಲ ವರ್ಷಗಳಿಂದ ಬದುಕಿದ್ದ ವನ್ಯ ಜೀವಿಗಳೇಕೆ ವಿನಾಶದಂಚಿಗೆ ಸರಿದವು?

ಕಾಳಿ ಕಣಿವೆ ಅರಣ್ಯಾವಲಂಬಿ ಯೋಜನೆಗಳಿಗೆಲ್ಲ ಪ್ರಯೋಗ ಶಾಲೆ. ಕಳೆದ ಒಂದು ಶತಮಾನದಲ್ಲಿ ಈ ಕಣಿವೆಯಲ್ಲಿ ನಿಸರ್ಗದ ಮೇಲೆ ಪ್ರಯೋಗಗಳು ನಿರಂತರವಾಗಿ ನಡೆದಿದ್ದರ ಫಲ ಇದು.


ಮೊದಲು ಬ್ರಿಟೀಶರ ಕಣ್ಣೀಗೆ ಬಿದ್ದದ್ದು ಬಿದ್ದದ್ದು ಹೇರಳಾವಾಗಿ ಇದ್ದ ಸಾಗವಾನಿ ಮರಗಳು. ಕಾಳಿ, ಕಾನೇರಿ ಕಣಿವೆಗಳಲ್ಲಿ ಮರ ಕಡಿದು, ಆ ಕಣಿವೆಯ ಇಳಿಜಾರಿನಲ್ಲೇ ಕೆಳಗೆ ಇಳಿಸಿ, ನದಿ ನೀರಿನಲ್ಲೇ ತೇಲಿಸಿ ಬಿಡುತ್ತಿದ್ದರಂತೆ. ಕಾಳಿ ನದಿಯಲ್ಲಿ ತೇಲುವ ಮರದ ದಿಮ್ಮಿಗಳನ್ನು ಕಾರವಾರದಲ್ಲಿ ಹಿಡಿದು ವಿದೇಶಗಳಿಗೆ (ಕ್ಷಮಿಸಿ, ತಮ್ಮ ದೇಶಗಳಿಗೆ) ಕಳುಹಿಸಲಾಗುತ್ತಂತೆ. ಹಳ್ಳೀಯ ಜನ ಈಗಲೂ ಸಾಗವಾನಿ "ಸಿಲೇಪಾರಿ"ಗೆ ಹೋಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಆ "ಸಿಲೇಪಾರು" ಅಂದರೆ ರೇಲ್ವೇ ಸ್ಲೀಪರುಗಳು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ!.


೧೯೧೯ರಲ್ಲಿ ಸಾ ಮಿಲ್ಲ್ ಒಂದು ಪ್ರಾರಂಭವಾಗುದರೊಂದಿಗೆ ದಾಂಡೆಲಿ ನಗರ ಪ್ರಾರಂಭವಾಯಿತು. ೧೯೪೪ರಲ್ಲಿ ಪ್ಲೈ ವುಡ್ ಕಂಪನಿ, ೧೯೫೫ರಲ್ಲಿ ಪೇಪರ್ ಮಿಲ್ಲ್, ಫ಼ೆರ್ರೊ ಅಲಾಯ್ಸ್ ಕಂಪನಿ, ೬೭ರಲ್ಲಿ ಚಿಪ್ ಬೊರ್‍ಡ್ ಕಂಪನಿ ಹೀಗೆ ಅರಣ್ಯಾಧಾರಿತ ಕೈಗಾರಿಕೆಗಳ ನಗರವಾಗಿ ದಾಂಡೇಲಿ ಬೆಳೆಯಿತು. ಈ ಕಂಪನಿಗಳಿಗೆ ಕಚ್ಛಾ ಮಾಲನ್ನು ಪೂರೈಸಲು ಗಣಿಗಾರಿಕೆಯೂ ಪ್ರಾರಂಬವಾಯಿತು. ೧೯೯೮ರ ಸುಮಾರಿಗೆ ಸುಮಾರು ೮೭ ಕಡೆಗಳಲ್ಲಿ ಅಧಿಕೃತವಾಗಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಈ ಕೈಗಾರಿಕೆಗಳೀಗಾಗಿ ದೇಶದೆಲ್ಲೆಡೆಯಿಂದ ನೌಕರರು ಬಂದು, ದಾಂಡೇಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ನಗರವಾಯಿತು.


ನಂತರ ಪ್ರಾರಂಭವಾದದ್ದು ವಿದ್ಯುತ್ ಉತ್ಪಾದನೆ. ಕಾಳಿ ಕಣಿವೆ ಏಳು ಬೃಹತ್ ಆಣೆಕಟ್ಟುಗಳು. ಸಾಲದ್ದಕ್ಕೆ ಕೈಗಾ ಬೇರೆ.
ಇವೆಲ್ಲವುಗಳ ನಡುವೆ ಹೇಗೆ ಉಳಿದಾವು ವನ್ಯಜೀವಿಗಳು?
ನಿರಾಸೆಗೊಳ್ಳಬೇಕಾದ್ದಿಲ್ಲ. .......
ಕಾಲ ಬದಲಾಗಿದೆ. .........

ಬರೀ ಕಾಡನ್ನು ಕಡಿದು ಅಭಿವೃದ್ದಿ ಸಾಧ್ಯವಿಲ್ಲ ಎನ್ನಲು ಉದಾಹರಣೆಯಾಗಿ ದಾಂಡೇಲಿಯ ಅರಣ್ಯಾಧಾರಿತ ಎಲ್ಲ ಕೈಗಾರಿಕೆಗಳು ಮುಚ್ಚಿವೆ. ಇದ್ದ ಒಂದೇ ಪೇಪರ್ ಮಿಲ್ಲ್, ಕೃಷಿ ಆಧಾರಿತ ಮರಗಳನ್ನು ನೆಚ್ಚಿಕೊಂಡಿದೆ.
ದಾಂಡೇಲಿ ನಗರದ ಜನಸಂಖ್ಯೆ ೪೮ ಸಾವಿರಕ್ಕೆ ಇಳಿದಿದೆ!

ಕಾಡನ್ನು ಕಡಿದೇ ಬದುಕ ಬೇಕು ಎನ್ನುವ ಜನರ ಸಂಖ್ಯೆ ಕಡಿಮೆ ಆಗಿ, ಕಾಡು ಆಧಾರಿತ ಪ್ರವಾಸೋದ್ಯಮ ಬೆಳೆಯುತ್ತಿದೆ.

ಸರಕ್ಷಣೆಯ ಪ್ರಯತ್ನಕ್ಕೆ ಬೆಂಬಲ ಸಿಗುತ್ತಿದೆ. ಈ ಪ್ರದೇಶ ಹುಲಿ ಸಂರಕ್ಷಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಅಲ್ಲಲ್ಲಿ ವನ್ಯ ಜೀವಿಗಳ ಕುರುಹುಗಳು ಹೆಚ್ಚೆಚ್ಚು ಸಿಗತೊಡಗಿದೆ.
ಹುಲಿಗಳು ಇನ್ನೂ ನಮ್ಮ ಕಾಡಿನಲ್ಲಿ ಓಡಾಡಿಕೊಂಡಿವೆ ಎನ್ನುವ ಖುಷಿ ಎಂದೂ ಇರುತ್ತದೆ ಎನ್ನುವ ಭರವಸೆ ಮೂಡಿದೆ!.
.........ಉಳೀಸಬೇಕಾದ ಪ್ರಯತ್ನದ ಜವಾಬ್ದಾರಿಯೂ ಹೆಚ್ಚಿದೆ.



6 comments:

Srinidhi said...

vibhinnavaada blog. nodi khushi aaytu. naanu 'follow' madida modala blog nimmade!

srinidhi
srinidhitg.blogspot.com

Padyana Ramachandra said...

ದಾಂಡೇಲಿಯಲ್ಲಿ ಸಿಕ್ಕಿದ ಹುಲಿ ಹೆಜ್ಜೆಯ ಸಂತಸವನ್ನು ಅಂತರ್ಜಾಲದ ಕನ್ನಡ ಓದುಗರೊಂದಿಗೆ ಹಂಚಿಕೊಂಡ ನಿಮಗೆ ವಂದನೆಗಳು.

-ಪ. ರಾಮಚಂದ್ರ, ರಾಸ್ ಲಫ್ಫಾನ್ -ಕತಾರ್ ದೇಶ.

ಮಲ್ಲಿಕಾರ್ಜುನ.ಡಿ.ಜಿ. said...

ದಾಂಡೇಲಿ ಕಾಡಿನ ಬಗ್ಗೆ, ಹುಲಿಯ ಹೆಜ್ಜೆಯ ಬಗ್ಗೆ ಮಾಹಿತಿ ಅದ್ಭುತ. ನಿಮ್ಮ ಕಾಡನ್ನು ನನಗೂ ನೋಡುವ ಆಸೆಯಿದೆ. ಯಾವಾಗ ಬಂದರೆ ಚೆನ್ನ?

Ittigecement said...

tumbaa chennaagide...

shivu.k said...

ಬಾಲಚಂದ್ರ,

ಮತ್ತೆ ನಿಮ್ಮ ಬ್ಲಾಗಿಗೆ ಬಂದೆ...ಕಾರಣ..ಹುಲಿ...ಹುಲಿಹೆಜ್ಜೆಯ ಫೋಟೋ ತುಂಬಾ ಚೆನ್ನಾಗಿದೆ...ನಾನೇ ಕಳುಹಿಸಿದ ಕ್ಯಾಮೆರಾವಲ್ಲವೇ...[ನನ್ನ ಬೆನ್ನು ನಾನೇ ತಟ್ಟಿಕೊಳ್ಳುವುದು ಹೀಗೆ]ನೀವು ಹುಲಿಯಿಂದ ನೇರ ಕಾಳಿ ಕಣಿವೆಗೆ ಬಂದು ಅದಕ್ಕೆ ಬೆಸುಗೆ ಮಾಡಿದ್ದೂ...ಚೆನ್ನಾಗಿದೆ...ಮತ್ತೆ ವಿಷಯಾಂತರ ಮಾಡುವುದನ್ನು ಒಂದು ಕಲೆ ಎನ್ನುತ್ತಾರೆ...
ಹೀಗೆ ಬರೆಯುತ್ತಿರಿ....

ಪ್ರಮೋದ ನಾಯಕ said...

ಭಾರೀ ಅದೃಷ್ಟ ಮಾದಿದ್ದೀರಿ ನೀವು..ಹಾ. ಒಮ್ಮಮ್ಮೆ ಅನಿಸುತ್ತದೆ, ನಮ್ಮ ಉತ್ತರಕನ್ನಡದ ಈ ಅಮೂಲ್ಯ ಅರಣ್ಯ ಸಂಪತ್ತೇ ಕುತ್ತಾಗಿ ಬಿಟ್ಟಿದೆ. ಒಳ್ಳೆಯ ಲೇಖನ. ಪ್ರಕೃತಿಯ ಕುರಿತು ಇನ್ನೂ ಲೇಖನಗಳು ಬರಲಿ.