ಕೄಷಿ

Wednesday, September 24, 2014

ಅಂಟೆ ಎಂಬ ಅಕ್ಷತ ನೆಲೆಗಳು

ನನಗಿನ್ನೂ ನೆನಪಿದೆ.  ಆಗ ನಾನಿನ್ನೂ ನಾಲ್ಕು ವರ್ಷದವನಿದ್ದನೇನೋ. ಇಡೀ ರಾತ್ರಿ ನಿದ್ದೆಯೇ ಬಂದಿರಲಿಲ್ಲ. ಬೆಳಿಗ್ಗೆ ಒಂದು ಅದ್ಭುತ ಲೋಕವನ್ನು ನೋಡಲು ಹೋಗಲು ಅನುಮತಿ ಸಿಕ್ಕಿತ್ತು. ಎಷ್ಟೆಲ್ಲ ದಿನಗಳಿಂದ ಅದಕ್ಕೆ ಕಾಯುತ್ತಿದ್ದೆ!

ಹಾಗೆ ಕಾತರದಿಂದ ಕಾಯುವಂತೆ ಮಾಡಿದ್ದು ಮತ್ತ್ಯಾವುದೂ ಅಲ್ಲ. ಅದು ’ಅಂಟೆ’ ಎನ್ನುವ ಕನಿಸಿನ ಲೋಕ. ಏಕೆಂದರೆ ಕಾಡಿನ ಮಧ್ಯೆ ಇದ್ದ ನಮ್ಮೂರಿನ ಎಲ್ಲರಿಗೆ ಏನು ಕೇಳಿದರೂ ’ಅಂಟೆ’  ಹೆಸರು ಹೇಳದೇ ಉತ್ತರ ಇರುತ್ತಿರಲಿಲ್ಲ.  ಅಜ್ಜ ನಂಗೊಂದು ಕೋಲು ಬೇಕು ಅಂದರೆ ಅಂಟೆಯಿಂದ ಒಳ್ಳೆ ಬೆತ್ತ ತಂದು ಮಾಡಿಕೊಡುತ್ತೇನೆ ಎನ್ನುತ್ತಿದ್ದ ಅಪ್ಪ. ಕೊಟ್ಟಿಗೆ ಸ್ವಚ್ಛ ಮಾಡುವ ಗಪ್ಪು ಈ ಹಿಡಿನೇ ಸರಿ ಇಲ್ಲ; ಈ ಬಾರಿ ಅಂಟೆಗೆ ಹೋದಾಗ ತರಬೇಕು ಅನ್ನುತಿದ್ದ.  ತೋಟಕ್ಕೆ ಬೇಲಿ ಕಟ್ಟಲು ಹೇಳಿದರೆ,  ಕಟ್ಟಿಗೆ ಕಡಿಯಲು ಉಪಯೋಗಿಸುವ ಕತ್ತಿ ತನ್ನ ಹರಿತ ಕಳೆದುಕೊಂಡರೆ ಕತ್ತಿ ಮಸೆಯುವ ಕಲ್ಲು ತರಲು, ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಏಣಿಗೆ ಬಿದಿರು ತರಲು, ಹೀಗೆ  ಎಲ್ಲ ಉಪಯೋಗಕ್ಕೂ ಅಂಟೆಯ ಹೆಸರು ಕೇಳಿ ಬರುತ್ತಿತ್ತು.

ಮಳೆಗಾಲದಲ್ಲಿ ಸುರೀತಾ ಇರೋ ಮಳೆ ಮಧ್ಯೆ, ಕಂಬಳಿ ಕೊಪ್ಪೆ ಸೂಡಿಕೊಂಡು,  ಅದರೂ ಮೈ ಎಲ್ಲ ಒದ್ದೇ ಮಾಡಿಕೊಂಡು,  ಅಜ್ಜಿ, ಆಯಿ ಎಲ್ಲ ಆ ಮಳೆಯಲ್ಲೇ ಉಪ್ಪಗೆ ಬೀಜ ಆರಿಸಲು ಅಂಟೆಗೆ ಹೋಗುತ್ತಿದ್ದರು. ಕೆಲವೊಮ್ಮೆ ದೂರದ ನೆಂಟರೂ ಚೌತಿಗೆ  ಒಂದಿಷ್ಟು ಉಪ್ಪಗೆ ತುಪ್ಪ ಮಾಡಲು ಬೀಜ ಆರಿಸಲು ಆ ಮಳೆಗಾಲದಲ್ಲೇ ಬರುತ್ತಿದ್ದರು. ಅವರೆಲ್ಲ, ಇಡೀ ದಿನ ಸುತ್ತಾಡಿ, ಒಂದು ಸಣ್ಣ ಚೀಲದಲ್ಲಿ ಉಪ್ಪಗೆ ಬೀಜ ಹೆಕ್ಕಿಕೊಂಡು, ಒದ್ದೆ ಮೈಯನ್ನು ಒಣಗಿಸಲು  ಹೊಡಸಲಿನ  ಎದುರು ಕುಳಿತು ಅಂಟೆಯ ಸುದ್ದಿ ಹೇಳುವಾಗ ಅದೊಂದು ಮಾಯಾಲೋಕ ಎಂದು ಅನಿಸುತ್ತಿತ್ತು.

ಜೇನುತುಪ್ಪ, ರಾಮಪತ್ರೆ, ಧೂಪ, ಎಲ್ಲವೂ ಅದೇ ಅಂಟೆಯಿಂದಲೇ ಬರುತ್ತಿತ್ತು.

ನಮ್ಮ ಮನೆಯ ಎಷ್ಟೋ ದನಕರುಗಳು ಹುಲಿಯ ಬಾಯಿಗೆ ಬಿದ್ದದ್ದು ಅವು ಈ ಅಂಟೆಗೆ ಹೋದಾಗಲೇ. ಒಮ್ಮೆ ಜೇನು ಹಿಡಿಯಲು, ದಳ್ಳೆ(ದೊಡ್ಡ ಪಾತ್ರೆ), ದೊಂದಿ ಎಲ್ಲ ಹೊತ್ತು ಹೋದ ಹತ್ತಾರು ಜನರ ತಂಡ, ಇನ್ನೇನು ಜೇನು ಮರ ಹತ್ತಬೇಕು ಎನ್ನುವಷ್ಟರಲ್ಲಿ, ಮರದ ಮೇಲಿದ್ದ ಕರಡಿಯನ್ನು ಕಂಡು ಹಿಂತಿರುಗಿ ಓಡಿ ಬಂದಿತ್ತು.

ಅಂಥ ಕಾಡಿನ ನಡುವೆಯೇ ಘಟ್ಟ ಹತ್ತಿ ಪ್ರತಿ ದಿನ ಬರುತ್ತಿದ್ದ ಮೊರ್ಸೆ ಮಾಸ್ತರರು ನಿಜವಾದ  ಹೀರೋ ಆಗಿದ್ದರು.

ಅಂಥ ಕನಸಿನ ಅಂಟೆಗೆ ಮರುದಿನ ಬೆಳಿಗ್ಗೆ ಹೋಗಲು ಅಪ್ಪನಿಂದ ಅನುಮತಿ ಸಿಕ್ಕಿತ್ತು. ಆ ಕುತೂಹಲದಲ್ಲಿ ರಾತ್ರಿ ನಿದ್ದೆಯೇ ಬಂದಿರಲಿಲ್ಲ.

ದೇವಸ್ಥಾನದ ಒಡವೆಗಳನ್ನು ಕದ್ದ ಕಳ್ಳ ಅವುಗಳನ್ನು ಅದೇ ಅಂಟೆಯಲ್ಲಿ ಅಡಗಿಸಿ ಇಟ್ಟಿದ್ದಾನೆ ಅಂತ ಯಾರೋ ಭವಿಷ್ಯ ಹೇಳಿದ್ದರಂತೆ. ಅದನ್ನು ಹುಡುಕಲು ಊರಿನ ಎಲ್ಲ ಹೋಗುವವರಿದ್ದರು. ಹಾಗಾಗಿ ನನಗೂ ಹೋಗಲು ಅನುಮತಿ ಸಿಕ್ಕಿತ್ತು. ಕಳೆದದ್ದು ಸಿಕ್ಕಿದೆಯೋ ಇಲ್ಲವೋ ನೆನಪಿಲ್ಲ; ಆದರೆ ಅಂದು ನೋಡಿದ ಅಂಟೆಯ ನೆನಪು ಮಾತ್ರ ಇನ್ನೂ ಹಸಿರಾಗಿದೆ.

ಸೂರ್ಯನೇ ಕಾಣದ ಕಾಡು, ನೀರು, ಜಲಪಾತ, ತಲೆಯೇ ಕಾಣದ ಮರಗಳು, ಎಷ್ಟು ಸುತ್ತಿದರೂ ಆಯಾಸವಾಗಿರಲಿಲ್ಲ.

ಅಂಟೆ ಎಂದರೆ, ಪಶ್ಚಿಮ ಘಟ್ಟದ ಇಳಿಜಾರು ಪ್ರದೇಶ. ದಟ್ಟ ನಿತ್ಯ ಹರ್ದ್ವರ್ಣ ಕಾಡು ಇರುವ ಈ ಪ್ರದೇಶ ಜೀವ ವೈವಿಧ್ಯದ ತಾಣವೂ ಹೌದು. ಅಲ್ಲಿ ಸಿಗುವ ಹಲವಾರು ಅರಣ್ಯ ಉತ್ಪನ್ನಗಳ ಉಪಯೋಗ ಅಲ್ಲೇ ಬದುಕುವ ನಮ್ಮಂತಹ ಜನರಿಗೆ ಅನಿವಾರ್ಯವಾಗಿತ್ತು. ಅಲ್ಲಿನ ಉಂಬಳ, ಜಲಪಾತಗಳು, ನೀರು, ದಟ್ಟ ಕಾಡು, ಚಿರತೆ, ಕಡವೆ, ಕಾಡುಕುರಿ, ಬರ್ಕ,  ಎಲ್ಲ ವಿಶಿಷ್ಟ ಅನುಭವ ನೀಡುತ್ತಿದ್ದರಿಂದ ಅಲ್ಲಿಗೆ ಹೀಗೆ ಹೋಗಿ ಬಂದವರು ಆ ವಿಷಯವಾಗಿ ರೋಚಕ ಕಥೆ ಹೇಳುತ್ತಿದ್ದರು.

ಒಂದು ದಿನ ಅಂಥ ಅಂಟೆಯ ನಡುವೆಯಿಂದಲೇ ಒಬ್ಬ ಹಿರಿಯ ನಮ್ಮ ಮನೆಗೆ ಬಂದಿದರು.  ಸರಿಯಾಗಿ ಕನ್ನಡವೂ ಬಾರದ ಅವರು ಹೇಗೆ ಬಂದರು ಎನ್ನುವುದೇ ನಮ್ಮ ಪ್ರಶ್ನೆಯಾಗಿತ್ತು. ದೂರದ ಪುಣೆಯಿಂದ ಇಲ್ಲಿರುವ ಅಯಾವುದೋ ಮಂಗನನ್ನು ಹುಡಿಕಿ ಬಂದಿದ್ದೇನೆ ಎಂದಾಗ ನಮಗೆ ಆಶ್ಚ್‌ರ್ಯ. ಅವರು ಸಿಂಗಳೀಕಗಳನ್ನು ಹುಡುಕಿ ಬಂದಿದ್ದರು. ಮುಂದೆ ಆ ಸಿಂಗಳೀಕಗಳು ನಮ್ಮ ಕಾಡಿನಲ್ಲಿ ಮಾತ್ರ ಇರುವ ಜೀವಿಗಳು ಎಂದು ಗೊತ್ತಾದಾಗ ಸಹಜವಾಗಿ ಹೆಮ್ಮೆ.

ಇವುಗಳ ನಡುವೆಯೇ ನಮ್ಮ ಮನೆ ಎದುರು ಪ್ರತಿ ದಿನ ಜೀಪೊಂದು ಬಂದು ನಿಲ್ಲಲು ಪ್ರಾರಂಭವಾಗಿತ್ತು. ಅವರನ್ನು ಸರ್ವೇಯವರು ಎಂದೇ ಎಲ್ಲ ಕರೆಯುತ್ತಿದ್ದರು. ಜನ ಅವರನ್ನು ಆತಂಕದಿಂದ ನೋಡ್ತಾ ಇದ್ರು. ಅವರು ಮನೆ ಮುಳುಗಿಸ್ತಾರಂತೆ ಅಂತ ಹೇಳೋ ಕಥೆ ನನಗೆ ಅರ್ಥವಾಗ್ತಿರಲಿಲ್ಲ. ಒಂದು ದಿನ ಆ ಜೀಪನ್ನೇ ತಡೆದು ಚಳಿವಳಿ ಶುರು ಮಾಡಿದ್ದಾರೆ ಅನ್ನುವ ಸುದ್ದಿ ಬಂತು . ನಮ್ಮ ಮನೆಯಿಂದಲೂ ಜನ ಹೋಗಿದ್ದರು.  ಆವತ್ತು ನನಗೆ ಸ್ವಲ್ಪ ಬೇಜಾರು ಆಗಿತ್ತು ; ಯಾಕೆಂದರೆ ಆ ಜೀಪಿನ ಡ್ರೈವರ್ ದಿನಾ ತಂದು ಕೊಡುತ್ತಿದ್ದ ಪೇಪ್ಪರ್ಮಿಂಟ್ ನನಗೆ ತಪ್ಪಿಹೋಗುತ್ತದೆ ಎಂದು. ಆ ಜೀಪು ಅಘನಾಶಿನಿ ಜಲವಿದ್ಯುತ್ ಯೋಜನೆಗಾಗಿ ಸರ್ವೆ ನಡೆಸುವ ಕಾರ್ಯವಾಗಿತ್ತು ಎಂದು ನನಗೆ ಗೊತ್ತಾದದ್ದು ತುಂಬಾ ವರ್ಷಗಳ ನಂತರ. 

ಕಳೆದ ನಾಲ್ಕು ದಶಕಗಳಲ್ಲಿ ನಿರಂತರವಾಗಿ ಪರಿಸರ ವಿನಾಶೀ ಯೋಜನೆಗಳು ಇಲ್ಲಿ ಪ್ರಸ್ತಾಪವಾಗುತ್ತಲೇ ಇವೆ. ಅವುಗಳ ವಿರುದ್ದದ ಹೋರಾಟದ ನಡುವೆಯೇ ನಾನು ಬೆಳೆದದ್ದು.


ಹೀಗಿರುವ ಅಂಟೆಗೆ ಅಪಾಯ ಬಂದಿದೆ ಎಂದು ಗೊತ್ತಾದಾಗ ಆತಂಕವಾದದ್ದು ಸಹಜ. ಉದ್ಯೋಗ, ಶಿಕ್ಷಣ ಅಂತೆಲ್ಲ ಹೊರಗಡೆ ಸುತ್ತಾಡುವಾಗ ಇದೇ ನೆನಪುಗಳು ಮತ್ತೆ ಮತ್ತೆ ಕಾಡುತ್ತಿದ್ದವು. ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್  ಸೈನ್ಸ್ ಎಂದು ನಗರದಲ್ಲಿ ಕಳೆದು ಹೊಗಬಹುದಾಗಿದ್ದ ಬದುಕನ್ನು ಮತ್ತೆ ಕಾಡಿಗೆ ತಂದದ್ದು ಅದೇ ನೆನಪುಗಳು. ಅದೇ ಪ್ರದೆಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಅಧ್ಯಯನ ವರದಿ ತಯಾರಿಸುವ ಕೆಲಸ ನನ್ನ ಜೀವನದ ಅತ್ಯಂತ ಖುಷಿ ಕೆಲಸ. ಈ ಅಂಟೆಯನ್ನು ನಿರಂತರವಾಗಿ ಉಳಿಸುವ ಕೆಲಸ ಇದರಿಂದ ಸಾಧ್ಯವಾಗುತ್ತದೆ ಎನ್ನುವುದೇ ಹೆಮ್ಮೆಯ ವಿಷಯ.

ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ; ಮೈಸೂರು, ದೆಹಲಿ, ಜರ್ಮನಿ ಮೊದಲಾದ ಕಡೆಗಳಲ್ಲಿ ಸಿಕ್ಕ ಉದ್ಯೋಗಾವಕಾಶವನ್ನು ಬದಿಗಿಟ್ಟೂ ಹಳ್ಳಿಗೆ ಬಂದು ಸಂರಕ್ಷಣೆ ಕೆಲಸಕ್ಕೆ ತೊಡಗಿಕೊಳ್ಳಬೇಕೆಂದು ಕೊಂಡಿದ್ದು ಬೇರಾವ ಭಾರೀ ಧ್ಯೇಯದಿಂದಲ್ಲ. ನಾನು ಕಂಡ ಈ ’ಅಂಟೆ’  ಇನ್ನೂ ಉತ್ತಮವಾಗಿ ಅಲ್ಲದಿದ್ದರೂ, ಕೊನೇ ಪಕ್ಷ ಅದೇ ರೀತಿಯಲ್ಲಾದರೂ ಇರಲಿ  ಎನ್ನುವ ನನ್ನ ಸ್ವಾರ್ಥ ಮಾತ್ರ. 

1 comment:

ವಿ.ರಾ.ಹೆ. said...

ವರ್ಷಗಳ ನಂತರ ಬಂದ ಬ್ಲಾಗ್ ಪೋಸ್ಟ್ ಇದು.!

ನಿಜ. ಇಂತಹ ಅಂಟೆಗಳು ಉಳಿಯಬೇಕು. ಯಾವ ಪರಿಸರದ ನಾಶದ ಯೋಜನೆಗಳೂ ನಮ್ಮ ಉತ್ತರಕನ್ನಡಕ್ಕೆ ಬೇಕಿಲ್ಲ. ನೀವು ಈ ತಯಾರಿಸುತ್ತಿರುವ ವರದಿಗೆ ಯಶಸ್ಸು ಸಿಗಲಿ. ಧನ್ಯವಾದಗಳು.