ಕೄಷಿ

Sunday, September 28, 2014

ಕಾಶ್ಮೀರದ ನೆನಪು

 ವರ್ಷದ ಹಿಂದೆ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿಯ ಪರಿಸರ,  ಬೆಟ್ಟ ಗುಡ್ಡಗಳು, ಹಿಮ, ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿನ ಕೇಸರಿ  ಕೃಷಿ ನನ್ನನ್ನು ಬಹುವಾಗಿ ಖುಷಿಗೊಳಿಸಿತ್ತು. ಆ ಹೊತ್ತಿನಲ್ಲಿ ಬರೆದ ಲೇಖನ ಇದು.  ಇದು ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸ್ಪೈಸ್ ಇಂಡಿಯಾ ಕೂಡ ತನ್ನ ಆರೂ ಭಾಷೆಯ ಆವೃತ್ತಿಯಲ್ಲಿ ,  ಈ ಲೇಖನವನ್ನು ಪ್ರಕಟಿಸಿತ್ತು. ಆ ಲೇಖನ ಮತ್ತೊಮ್ಮೆ  ಕಾಶ್ಮೀರದ ನೆನಪಿಗಾಗಿ; ನೆರೆಯಿಂದ ಹಾಳಾಗಿ ಹೋಗಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ.  ಈಗ ಹೇಗಿದೆಯೋ ಅಲ್ಲಿ?
ದಾಲ್ ಲೇಕ್ ನ ನೋಟ;

ಕುಂಕುಮ ಕೇಸರಿ: ಬಣ್ಣದಷ್ಟೇನೂ ಆಕರ್ಷಕವಲ್ಲದ ಕೃಷಿ

ಹೊರಟಿದ್ದು ಕನ್ಯಾಕುಮಾರಿಗೆ. ಹೋಗಿದ್ದು ಕಾಶ್ಮೀರಕ್ಕೆ.  ಮಗಳ ಅಕ್ಟೋಬರ್  ರಜೆಯಲ್ಲಿನ ಪ್ರವಾಸಕ್ಕೆಂದು ಕನ್ಯಾಕುಮಾರಿಗೆ ಹೋಗೋಣವೆಂದು ಟ್ರೇನ್ ಟಿಕೇಟಿಗೆ ವಿಚಾರಿಸಿದರೆ, ಟಿಕೆಟ್ ಸಿಗಲಿಲ್ಲ. ಕಾಶ್ಮೀರಕ್ಕೆ ಹೋಗಲು ಸೀಟ್ ಇದೆ ಎಂದ. ಕಾಶ್ಮೀರ ಎಂದ ತಕ್ಷಣ ನೆನಪಾಗಿದ್ದು ಕೇಸರಿ ಕೃಷಿ. ಅಲ್ಲಿನ ಹಿಮ ನನಗೆ ಹೊಸದಾಗಿರಲಿಲ್ಲ.  ಸೇಬು ಕೃಷಿ ಸಹ. ಯುರೋಪಿನಲ್ಲಿ ನೋಡಿದ್ದೆ. ಆದರೆ ಕೇಸರಿ ಬೆಳೆ ಬಗ್ಗೆ ಏನೋ ಒಂಥರ ಆಸಕ್ತಿ. ವಿಚಾರಿಸಿದರೆ, ಈಗಾಗಲೇ ಕೇಸರಿ ಬೆಳೆ ಹೊಲದಲ್ಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು.  ಆ ವಾರದಲ್ಲಿ  ಕೇಸರಿ ಹೂವುಗಳನ್ನು ಕೀಳಲಿದ್ದಾರೆ ಎನ್ನುವುದು ಮತ್ತಷ್ಟು ಗಡಿಬಿಡಿಯಲ್ಲಿ ಹೋಗಲು ನಿರ್ಣಯಿಸಲು ಕಾರಣವಾಗಿತ್ತು. ಅದೇ ವಾರದಲ್ಲಿ ದೆಹಲಿಯಲ್ಲಿದ್ದ ಕಾರ್ಯಕ್ರಮವೊಂದನ್ನು ನೆಪವಾಗಿಸಿ ಕೊಂಡು ಹೊರಟೇಬಿಡುವ ಯೋಚನೆ ಮಾಡಿದೆವು. ಆದರೆ ಟ್ರಾವೆಲ್ ಏಜಂಟ್ ಹೋಗೊ ಟಿಕೆಟ್ ಮಾತ್ರ ಇದೆ.  ರಿಟರ್ನ್ ಟಿಕೆಟ್ ಇಲ್ಲ; ಮುಂದಿನ ಎರಡು ವಾರ ಸಿಗೋದು ಕಷ್ಟ ಎಂದು ಹೇಳಬೇಕೆ?.  ಹಿಂತಿರುಗುವ ಟಿಕೆಟ್ ಇಲ್ಲದೆಯೇ ಹೊರಟಿದ್ದೆವು.  ಕಾಶ್ಮೀರಕ್ಕೆ ಹೊರಟಿದ್ದೀರಾ? ಅದೂ ರಿಟರ್ನ್ ಟಿಕೆಟ್ ಇಲ್ಲದೆ ಎಂದವರೇ ಹೆಚ್ಚು.

ಶ್ರೀನಗರಕ್ಕೆ ಹೊದ ಮೊದಲ ದಿನದಿಂದಲೇ ನಾವು ಕೇಸರಿ ಎಲ್ಲಿ ಬೆಳೆಯುತ್ತಾರೆ ಎಂದು ವಿಚಾರಿಸುತ್ತಲೇ ಇದ್ದೆವು. ವಾಹನ ಚಾಲಕ ಇಲ್ಲೆಲ್ಲೂ ಇಲ್ಲ, ಇನ್ನೊಂದು ದಾರಿಯಲ್ಲಿದೆ ಎಂದು ಹೇಳಿದ್ದ. ಈದ್ ಹಬ್ಬದ ದಿನವಾದ್ದರಿಂದ ಅಲ್ಲಿಗೆ ಹೋಗುವ ದಿನವನ್ನೂ ನಾವು ಮುಂದೂಡಲೇ ಬೇಕಾಗಿತ್ತು. ಅಂತೂ ಅಲ್ಲಿಗೆ ಹೋದ ಮೂರನೇ ದಿನ ನಾವು ಕೇಸರಿ ಹುಡುಕಲು ಹೊರಟಿದ್ದೆವು.
ದಾಲ್ ಲೇಕ್ ನಲ್ಲಿ
 

ಹೂ ಮಾರುವವ;

ಕಣ್ಣು ತುಂಬಿದ ಕೇಸರಿ:


  ಬೆಳಿಗ್ಗೆ ಹೊರಟಿದ್ದು ಪಹಲ್ಗಾಮ್ ಎನ್ನುವ ಪ್ರವಾಸಿ ತಾಣಕ್ಕೆ. ಶ್ರೀನಗರದಿಂದ ೯೬ ಕೀ.ಮೀ. ದೂರದಲ್ಲಿರುವ ಪಹಲ್ಗಾಮ್ ಅಮರನಾಥ ದೇವಾಲಯಕ್ಕೆ ಹೋಗುವ ದಾರಿಯಲ್ಲಿವ ಒಂದು ಊರು. ಅಮರನಾಥ ಯಾತ್ರೆಗೆ ಇಲ್ಲಿಂದ ಮುಂದೆ ನಡೆದು ಹೋಗಬೇಕು.

ಇನ್ನೇನು ಒಂದು ಘಂಟೆ ಪ್ರವಾಸ ಮಾಡಿದ್ದೆವಷ್ಟೆ! ಶ್ರೀನಗರದ ಕೆರೆ, ಪರ್ವತಗಳು ಮರೆಯಾಗಿ ಬಯಲು ನಾಡು ಶುರುವಾದಂತೆ ಕಾಣಿಸುತ್ತಿತ್ತು. ನಮ್ಮ ಅರೆ ಮಲೆನಾಡು ಪ್ರದೇಶದ ಹಾಗೆ ಕಣ್ಣಿಗೆ ಕಾಣುವಷ್ಟು ದೂರ ಬಯಲು. ಮರಗಳೇ ಇಲ್ಲ. ಇದ್ದಕ್ಕಿದ್ದಂತೆ ಕಾಣುವಷ್ಟು ದೂರವಿದ್ದ ಬಯಲಿನ ತುಂಬ  ನೇರಳೆ ಬಣ್ಣದ ಹೂವುಗಳು!. ಉದ್ದುದ್ದ ಏರು ಮಡಿಯಲ್ಲಿ ನೆಲದೆತ್ತರದಲ್ಲಿ ಹಾಸಿ ಬೆಳೆದ ಹೂವುಗಳು. ವಾಹನದಲ್ಲಿದ್ದ ಎಲ್ಲರೂ ಒಮ್ಮೆಲೇ ’ನಿಲ್ಲಿಸು’ ಎಂದು ಕೂಗಿದ್ದೆವು.   ನಾವು ನಾಲ್ಕು ದಿನಗಳಿಂದ ಹುಡುಕುತ್ತಿದ್ದ ಕೇಸರಿ ಬೆಳೆಯ ಹೊಲ ಅದಾಗಿತ್ತು. ಕಾಶ್ಮೀರ ಎಂದಾಕ್ಷಣ ನನಗಂತೂ ನೆನಪಿಗೆ ಬರುತ್ತಿದ್ದುದು ಕೇಸರಿ ಬೆಳೆಯೇ!. ಕಾಶ್ಮೀರಕ್ಕೆ ಹೊರಟಿದ್ದೂ ಬೆಳೆ ನೋಡುವುದಕ್ಕಾಗಿಯೇ ಆಗಿತ್ತು.   ಅದು ಎದುರು  ಸಿಕ್ಕಾಗ ಖುಷಿಯೋ ಖುಷಿ.
ಕೇಸರಿ ಹೊಲ ಕಂಡ ತಕ್ಷಣ ಅಲ್ಲೇ ನಿಲ್ಲಿಸಿ ಹೊಲ ಸುತ್ತ ತೊಡಗಿದ್ದೆವು. ಆದರೆ ಹೊಲ ಎಲ್ಲ ಖಾಲಿ ಖಾಲಿ.  ಅಲ್ಲಲ್ಲಿ ಒಂದಿಷ್ಟು ಪ್ರವಾಸಿಗರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ನಮಗೆ ಬೇಕಿದ್ದದ್ದು ರೈತರಾಗಿತ್ತು.  ನಮ್ಮ ಡ್ರೈವರ್ ಇರ್ಫ಼ಾನ್‌ನಿಗೆ  ಪಹಲ್ಗಾಮ್ ತೋರಿವ ಆಸೆ.   ನಾವು ಇಲ್ಲೆ ಕೇಸರಿ ಹೊಲದಲ್ಲಿ ಸುತ್ತಾಡುತ್ತೇವೆ.  ನಮಗೆ ರೈತರನ್ನು ಮಾತಾನಾಡಿಸಬೇಕು ಅವರನ್ನು ತೋರಿಸು, ಅಷ್ಟೆ ಸಾಕು ಎನ್ನ ಬೇಕಾಯಿತು. ರೈತರ ಮನೆ ಇರೋದು ಇನ್ನೊಂದು ಕಿಲೋಮೀಟರ್ ದೂರ ಎಂದ. ಆತನಿಗೆ ತೋರಿಸಬೇಕಾದ ಪ್ರವಾಸಿ ತಾಣ ತೋರಿಸದಿದ್ದರೆ, ಟ್ರಾವೆಲ್ ಏಜಂಟ್ ಬೈದಾನೆಂಬ ಹೆದರಿಕೆ. ನಮಗೆ ಪ್ರವಾಸಿ ತಾಣ ನೋಡದಿದ್ದರೂ ಪರವಾಗಿಲ್ಲ, ಕೇಸರಿ ಕೃಷಿಕ ಬೇಕು ಎಂದು. ಕೊನೆಗೆ ಅಲ್ಲೇ ಒಂದು ಸಣ್ಣ ಹಳ್ಳಿಗೆ ಕರೆದೊಯ್ದ.


ಸಣ್ಣ ಹಳ್ಳಿ. ಮೂವತ್ತು  ನಲವತ್ತು ಮನೆಗಳಿರಬಹುದು. ಹೊಟ್ಟೆಯ ಮೇಲೆ  ’ಕಂಡೀಲಾ’ ಇಟ್ಟುಕೊಂಡು ಮೇಲೆ ಉದ್ದದ ಶೇರವಾನಿ ಹಾಕಿರುವ ಗಂಡಸರು. ಕಂಡೀಲ ಎಂದರೆ ಒಂದು ಸಣ್ಣ ಮಣ್ಣಿನ ಪಾತ್ರೆ. ಇದ್ದಲಿ ಹಾಕಿ ಬೆಂಕಿ ಹೊಗೆ ಬರುವಂತೆ ಮಾಡಿ ಅದನ್ನು ಹೊಟ್ಟೆಯ ಮೇಳೆ ಇಟ್ಟುಕೊಂಡಿರುತ್ತಾರೆ. ಬೆಚ್ಚಗಿರಲಿ ಎಂದು. ಆ ಮಣ್ಣಿನ ಪಾತ್ರೆಗೆ ಬೇರಿನಿಂದ ಚಂದದ ನೇಯ್ಗೆ ಮಾಡಿರುತ್ತಾರೆ.  ಶೇರವಾನಿ ಒಳಗೆ ಕಂಡೀಲವನ್ನು ಕೈಗಳಲ್ಲಿ ಹಿಡಿದಿರುವುದರಿಂದ ಶೇರವಾನಿಯ ತೋಳು ಬರೀ ನೇತಾಡುತ್ತಿರುತ್ತದೆ.  ಮೊದಲ ಬಾರಿ ನೋಡಿದರೆ ಇವರಿಗೆ ಕೈ ಇಲ್ಲವೇನೋ ಎನ್ನುಸವ ಹಾಗೆ.

ಮೊದಲು ಮಾತನಾಡಿಸಿದ ರೈತ ಫ಼ಾರೋಕ್ ಭಟ್. ಲೇತಾಪುರ ಎನ್ನುವ ಹಳ್ಳಿ. ಪಾಂಪೋರ್ ಜಿಲ್ಲೆಯ ಒಂದು ಹಳ್ಳಿ. ಪಾಂಪೋರ್ ಜಿಲ್ಲೆ ಕಾಶ್ಮೀರದಲ್ಲಿ ಅಒಟ್ಟು ಕಾಶ್ಮೀರದ ಕೇಸರಿ ಬೆಳೆಯ ಶೇ ೯೦ ಈ ಜಿಲ್ಲೆಯಿಂದಲೇ ಉತ್ಪಾದನೆ ಆಗುವುದಂತೆ.  ಆಮ್ಮು ಪ್ರದೇಶದ ಕಿಸ್ತವಾರ್ ಜಿಲ್ಲೆಯಲ್ಲೂ ಸ್ವಲ್ಪ ಪ್ರಆಣದ ಬೆಳೆ ಇದೆಯಂತೆ.


ಪಾರೋಕ್ ಭಟ್ಟರ ಕುಟುಂಬ್ ಮೊದಲಿನಿಂದಲೂ ಕೇಸರಿ ಕೃಷಿಯಲ್ಲಿ ಬದುಕಿದ ಕುಟುಂಬ.  ಇರೋದು ಹದಿನೈದು ಕನಾಲ್. ಕನಾಲ್ ಎಂದರೆ ಜಮೀನಿನ ಅಳತೆ. ಹತ್ತು ಕನಾಲ್ ಎಂದರೆ ಒಂದು ಎಕರೆ ಇರಬಹುದು ಎಂದ. ಸರಿಯಾಗಿ ಆತನಿಗೂ ಗೊತ್ತಿಲ್ಲ.  

ಪ್ರತಿ ಹೂವಿನಲ್ಲಿ ಸಿಗೋದು ಮೂರು ಕೇಸರಿ ಕುಸುಮ; ಮೂರು ಹಳದಿ ಕುಸುಮ ಇರುತ್ತದೆ. ಈ ಹಳದಿ ಕುಸುಮವನ್ನು ಉಪಯೋಗಿಸುವುದಿಲ್ಲ.  ಕೇಸರಿ ಬಣ್ಣದ ಭಾಗಕ್ಕೆ ಮೊಂಗ್ರ  ಅಥವಾ ನೆವಲ್ ಎಂದು ಎಂದು ಕರೆಯುತ್ತಾರೆ. ಅದರ ಬುಡದ ತಿಳಿ ಕೇಸರಿ-ಹಳದಿ ಭಾಗವನ್ನು ಲಾಚ್ಚಾ ಎಂದು ಕರೆಯುತ್ತಾರೆ. ಮೊಂಗ್ರಾ ಕೇಸರಿ ನಾವು ಉಪಯೋಗಿಸುವ ಉತ್ತಮ ಕೇಸರಿ. ಲಾಚ್ಚಾ ವನ್ನು ಪಾನ್ ಮಸಾಲಾ ಕಂಪನಿಗಳು ಖರೀದಿಸುತ್ತವೆಯಂತೆ.

ದಶಕದ ಬೆಳೆ:
ಕೇಸರಿ ಬೆಳ್ಳುಳ್ಳಿ ಗಡ್ಡೆಯ ಹಾಗಿರುವ ಗಡ್ಡೆ ಸಸ್ಯ. ಎರಡು ಮೂರು ಗಡ್ಡೆಗಳು ಒಟ್ಟೊಟ್ಟಿಗೇ ಇರುತ್ತವೆ.  ಗೆಣಸು ಬೆಳೆಯುವ ಹಾಗೆ ಏರು ಮುಡಿ ಮಾಡಿ ಗಡ್ಡೆಗಳನ್ನು ನೆಡಬೇಕು. ನಾಲ್ಕು ಬೆರಳು ಕೆಳಗೆ ಹುಡಿಯಾದ ಮಣ್ಣಿನಲ್ಲಿ ನೆಡಬೇಕು.

ಒಮ್ಮೆ ನೆಟ್ಟರೆ ಏಳೆಂಟು ವರ್ಷ ಗಡ್ಡೆ ಅಲ್ಲೇ ಇರುತ್ತದೆ. ಅದೇ ಗಡ್ಡೆ ಬೇಸಿಗೆ ಬಂದ ಮೇಲೆ ಮತ್ತೆ ಚಿಗುರೊಡೆಯುತ್ತದೆ. ಒಂದಿಷ್ಟು ಸತ್ತು ಹೋದ ಗಡ್ಡೆಗಳನ್ನು ಹುಡುಕಿ ಬೇರೆಯದನ್ನು ನೆಡಬೇಕು. ಆದರೆ ಮೊದಲೇ ಹೆಚ್ಚು ಕೆಲಸಗಾರರನ್ನು ಬೇಡುವ ಬೆಳೆ ಇದಾದ್ದರಿಂದ ಆದಷ್ಟು ನೆಡುವ ಕೆಲಸ ಉಳಿಯುತ್ತದೆ ಎಂದು ರೈತರು ಮತ್ತೆ ಮತ್ತೆ ಗಡ್ಡೆಗಳನ್ನು ಕಿತ್ತು ನೆಡುವುದಿಲ್ಲ ಎನ್ನುತ್ತಾರೆ ಭಟ್.

ಜೂನ್ ತಿಂಗಳಲ್ಲಿ ಒಮ್ಮೆ ಝೌನ್ ಮಾಡಬೇಕು. ಆತ ಹೇಳುವ ಪ್ರಕಾರ ಅದು ’ಹೂಟೆ’ ಆಗಿರಬೇಕು. ಈತ ಹೇಳಿದ್ದು ಕಾಶ್ಮೀರಿ ಮಿಸ್ರಿತ ಹಿಂದಿಯಲ್ಲಿ. ನನಗೆ ಸರಿಯಾಗಿ ಅರ್ಥವಾಗಿಲ್ಲ.  ಝೌನ್ ಮಾಡುವುದರಿಂದ ಗಡ್ಡೆಗಳ ನಡುವೆ ಮಣ್ಣು ಸಡಿಲವಾಗಿ, ಗಾಳಿಯಾಡುವಂತಾಗುತ್ತದೆ. ಅದರಿಂದ ಹೆಚ್ಚು ಮರಿ ಗಡ್ಡೆಗಳು ಬರುತ್ತವೆಯಂತೆ. ಇಲ್ಲದಿದ್ದರೆ ವರ್ಷ ವರ್ಷ ಬೆಳೆ ಕಡಿಮೆಯಾಗುತ್ತದೆ.

ನಂತರ ಸಪ್ಟೆಂಬರಿನಲ್ಲಿ ಕಳೆ ತೆಗೆದು ನೀರು ಬಸಿದು ಹೋಗುವ ಹಾಗೆ ನೊಡಿಕೊಳ್ಳಬೇಕು. ಅಕ್ಟೋಬರಿನಲ್ಲಿ ಒಮ್ಮೆಲೆ ಗಡ್ಡೆ ಚಿಗುರಲು ಪ್ರಾರಂಭಿಸುತ್ತದೆ. ಒಂದೇ ತಿಂಗಳಿನಲ್ಲಿ ಹೂವು ಅರಳುತ್ತದೆ. ಅಕ್ಟೋಬರ್ ಕೊನೆಯಲ್ಲಿ ಹೂ ಕೊಯ್ದು, ನಂತರ ಇನ್ನೊಮ್ಮೆ  ಹೂಟೆ ಮಾಡಿ, ಗೊಬ್ಬರ ಹಾಕಿದರೆ ಆಯಿತು. ಈ ಬಾರಿ ಕಬ್ಬಿಣದ ನೇಗಿಲು ಉಪಯೋಗಿಸಿ ಹೆಚ್ಚು ಆಳಕ್ಕೆ ಹೂಟೆ ಮಾಡಬೇಕು. ಗೊಬ್ಬರ ಮಣ್ಣಿನೊಂದಿಗೆ ಸೇರಬೇಕು. ನವೆಂಬರ್ ಡಿಸೆಂಬರಿನಲ್ಲಿ ಹಿಮ ಬೀಳಲು ಪ್ರರಂಭವಾಗುತ್ತದೆ ನಂತರ ಮುಂದಿನ ಜೂನ್ ವರೆಗೆ ಗಡ್ಡೆ ಪ್ರಿಜ್ ನಲ್ಲಿ ಇರುತ್ತದೆ ಎಂದು ನಗುತ್ತಾನೆ  ನೂರ್ ಮುಹಮ್ಮದ್ ಅಜ್ಜ.
ಎನಾದರೂ  ದೇವರು ಕೊಟ್ಟರೆ ಮಾತ್ರ ಸಿಗೋ ಬೆಳೆ ಇದು. ವಾತಾವರಣದಲ್ಲಿ ಹೆಚ್ಚು ಕಡಿಮೆ ಆದರೆ ಬೆಳೆನೂ ಏರುಪೇರು.

ಗುಡ್ಡ ಅಗೆದು ಇಲಿ ಹುಡುಕಿದ ಹಾಗೆ:


ಹೊಲದಿಂದ ಇಡೀ ಹೂವನ್ನೇ ಕೊಯ್ಯುತ್ತಾರೆ.  ಮನೆಗೆ ತಂದು ಕೇಸರಿ ಬೇರ್ಪದಿಸಬೇಕು. ಒಂದು ಕೇಸರಿ ಹೂವಿನಲ್ಲಿ ಮೂರು ಕೇಸರಿ ಕುಸುಮಗಳನ್ನು ಬೇರ್ಪಡಿಸಬೇಕು. ಆ ಕುಸುಮದ ಬುಡ ಭಾಗವನ್ನು (ಲಚ್ಚಾ) ಬೇರೆ ಕತ್ತರಿಸಿ,   ಒಣಗಿಸಬೇಕು.  ಒಣಗಿದ ನಂತರ ನೀರಿನಲ್ಲಿ ಅದ್ದಿ ತೆಗೆದು ಬಟ್ಟೆಯಲ್ಲಿ ಸುತ್ತಿ ನಾಲ್ಕು ಘಂಟೆ ಇಡುತ್ತಾರೆ. ನಂತರ ಗ್ರೇಡಿಂಗ್  ಮಾಡಿ ಮತ್ತೆ  ಒಣಗಿಸುತ್ತಾರೆ. ಒಂದು ಕ್ವಿಂಟಾಲ್ ಹೂವು ಕೊಯ್ದರೆ ಒಂದು ಒಂದುವರೆ ಕೇಜಿ ಒಣಗಿದ ಕೇಸರಿ ದೊರೆಯುತ್ತದೆಯಂತೆ.
ಒಂದು ಎಕರೆಗೆ ಒಂದು ಕೇಜಿ ಕೇಸರಿ ಬಂದರೆ ಅದೇ ಒಳ್ಳೆ ಬೆಳೆ.

ಇಸ್ಮಾಯಿಲ್ ಭಟ್ ಹೇಳುವ ಲೆಕ್ಕಾಚಾರ ಕೇಳಿ. ಒಂದು ಹೆಕ್ಟೇರ್ ಕೇಸರಿ ಬೆಳೆಯಲು ೫೦೦ ರಿಂದ ೬೦೦ ಮಾನವ ದಿನ ಬೇಕಂತೆ. ೧೬೦ ಆಳು ಕಳೆ ತೆಗೆಯಲು,  ಗಡ್ಡೆ ನೆಡಲು ೮೦ ಆಳು, ಹೂಟೆ ಮಾಡಲು ೧೨೦ ಆಳು, ಹೂ ಕೊಯ್ದು, ಕುಸುಮ ಬೇರ್ಪಡಿಸಿ, ಒಣಗಿಸಿ, ಗ್ರೇಡಿಂಗ್ ಮಾಡಲು ೧೨೦  ಮಾನವ ದಿನ ಬೇಕಂತೆ.
ಒಂದು ಕ್ವಿಂಟಾಲ್ ಹೂವುಗಳಲ್ಲು ಕೊಯ್ದರೆ ಒಂದು ತೊಲೆ  ಕೇಸರಿ ಸಿಗುತ್ತದೆಯಂತೆ. ಒಂದು ಕ್ವಿಂಟಾಲಿಗೆ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಹೂವು ಬೇಕಂತೆ. ಅಷ್ಟೆಲ್ಲ ಲೆಕ್ಕ ಕೇಳುವಾಗ ಪಕ್ಕದಲ್ಲಿದ್ದ ಹೆಂಡತಿ ಹೇಳಿದ್ದು ’ಇದು ನಮಗೆ ಆಗೋ ಕೃಷಿಯಲ್ಲ’ ಎಂದು.  
ಆದ್ರೂ ಒಂದಿಷ್ಟು ಗಡ್ಡೆ ಕೊಡು ಎಂದು ಕೇಳಿ ತೆಗೆದುಕೊಳ್ಳಲು ಮರೆಯಲಿಲ್ಲ.

 

ಮನೆ ಮಂದಿಯೆಲ್ಲರ ರಜಾ ದಿನದ ಕೆಲಸ:


ಕೇಸರಿ ಹೂ ಕೀಳಲು ಕೂಲಿಕಾರ್ಮಿಕರು ಹೆಚ್ಚು ಬೇಕು. ಹೆಚ್ಚಾಗಿ ಮನೆಯವರೇ ಈ ಕೆಲಸ ಮಾಡುತ್ತಾರೆ. ಈ ವರ್ಷ ಈದ್ ಹಬ್ಬದ ಸಮಯದಲ್ಲೇ ಹೂ ಕೊಯ್ಲಿಗೆ ಬಂದಿದೆ. ಹಾಗಾಗಿ ಹೊರಗಡೆ ನೌಕರಿ ಇದ್ದವರೆಲ್ಲ ಊರಿಗೆ ಬಂದಿದ್ದಾರೆ. ಉಧಂಪುರ ದಲ್ಲಿ ರೇಲ್ವೆ ಇಲಾಖೆಯಲ್ಲಿ ನೌಕರಿ ಇರುವ ಮುಹಮ್ಮದ್ ಘನಿ ಭಟ್ ಸಹ ಹೊಲದಲ್ಲಿ ಹೂ ಕೀಳುತ್ತಿದ್ದರು. ಕೇಸರಿ  ಸಿಕ್ಕಾಪಟ್ಟೆ ಕೆಲಸಗಾರರನ್ನು ಬೇಡುವ ಕೃಷಿ. ಎಲ್ಲ ಸೇರಿ ಕೊಯ್ಯುತ್ತಿರುವುದರಿಂದ ಹೊರಗಿನ ಕೂಲಿಕಾರ್ಮಿಕರಿಗೆ ಕೊಡುವ ಹಣ ಸ್ವಲ್ಪ ಉಳಿಯುತ್ತದೆ. ಹಾಗಾಗಿ ಸ್ವಲ್ಪ ಲಾಭವಾಗಬಹುದು ಎನ್ನುತ್ತಾರೆ. ಎಕರೆಗೆ ಒಂದು ಕೆಜಿ ಸಿಕ್ಕರೆ, ಸುಮಾರು, ಎರಡುವರೆಯಿಂದ ಮೂರು ಲಕ್ಷ ರೂಪಾಯಿ ಬರುತ್ತದೆ. ಮನೆಯವರೇ ಎಲ್ಲ ಕೆಲಸ ಮಾಡುವುದರಿಂದ ಈ ಹಣದಲ್ಲಿ ಬದುಕಬಹುದು. ಎಲ್ಲ ರೈತರೂ ಚಿಕ್ಕ ಹಿಡುವಳಿ ದಾರರೇ.  ಒಂದೆಕರೆಗಿಂತ ಹೆಚ್ಚು ಭೂಮಿ ಇರುವ ರೈತರ ಸಂಖ್ಯೆ ಕಡಿಮೆ.  ವರ್ಷಕ್ಕೆ ಎರಡು ಎರಡು  ಮೂರು ಲಕ್ಷ ಒಟ್ಟೂ ಆದಾಯ ಬರುತ್ತದೆ  ಎನ್ನುತ್ತಾರೆ.

 

ಮರೆಯಾಗುತ್ತಿರುವ ಬೆಳೆ:


ಕೇಸರಿ ಬೆಳೆ ದಿನೇ ದಿನೇ ಕಡಿಮೆ ಆಗುತ್ತಿದೆಯಂತೆ. ಎಲ್ಲಡೆಯ ಹಾಗೆ ರೈತರ ಬವಣೆ ಒಂದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಗಳಿಗೇ ಹೆಚ್ಚು ಲಾಭ. ರೈತರಿಗೆ ಬೆಳೆಯ ಕರ್ಚಿಗಿಂತ ಕಡಿಮೆ ಆದಾಯ. ನೂರ ಮಹಮ್ಮದ್ ಭಟ್ ಹೇಳುವಹಾಗೆ ಒಂದು ಕನಾಲ್ ಕೇಸರಿ ಬೆಳೆ ಬೆಳೆಯಲು ಏನಿಲ್ಲ ಎಂದರೂ ಹೈದಿನೈದು ಸಾವಿರ ರೂಪಾಯಿ ಬೇಕು. ಕಳೆದ ವರ್ಶ ಅವರಿಗೆ ಬಂದ ಆದಾಯ ಕನಾಲಿಗೆ ೧೩ ಸಾವಿರ ರೂಪಯಿ. ನಿಕ್ಕಿ ಎರಡು ಸಾವಿರ ನಷ್ಟ!. ಆದರೆ ಈ ವರ್ಷ ಬೆಳೆ ಚನ್ನಾಗಿದೆ ಎನ್ನಲು ಮರೆಯಲಿಲ್ಲ.
ಸರಕಾರಿ ಇಲಾಖೆಗಳ ಅಂಕಿ ಸಂಖ್ಯೆಯೂ ಅದನ್ನೇ ಹೇಳುತ್ತದೆ. ಕಳೆದ ಒಂದು ದಶಕದಲ್ಲಿ ಬೆಳೆಯುವ ಪ್ರದೇಶ ಐದೂವರೇ ಸಾವಿರ ಹೇಕ್ಟೇರು ಪ್ರದೇಶಗಳಿಂದ ಮೂರು ಸಾವಿರ ಹೇಕ್ಟೇರು ಪ್ರದೇಶಕ್ಕೆ ಇಳಿದಿದೆಯಂತೆ.

ಅದನ್ನೇ ಇನ್ನೊಬ್ಬ ಕೃಷಿಕ ಇಸ್ಮಾಯಿಲ್ ಭಟ್‌ಗೆ ಕೇಳಿದರೆ, ’ಎಲ್ಲ ಸುಳ್ಳು. ಎಷ್ಟೊಂದು ಹೊಸ ಪ್ರದೇಶದಲ್ಲಿ  ಹೊಸದಾಗಿ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಬಹುಷಹ  ಸೇಬು ಬಿಟ್ಟರೆ ಕೇಸರಿಯೇ ಹೆಚ್ಚು ಜನಪ್ರಿಯ ಬೆಳೆ. ಆರೆಂಟು ವರ್ಷಕ್ಕೆ ಒಮ್ಮೆ ಕೇಸರಿ ಗಡ್ಡೆ ಕಿತ್ತು ಅಲ್ಲಿ ಗೋಧಿ ಅಥವಾ ಭತ್ತ ಬೆಳೆಯುವುದು ಅನಿವಾರ್ಯ. ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಹಾಗೆ ಮಾಡದಿದ್ದರೆ ಇಳುವರಿ ಕಡಿಮೆಯಾಗುತ್ತದೆ.  ಆದರೆ ಕೇಸರಿ ಮತ್ತೆ ಬಂದೇ ಬರುತ್ತದೆ’ ಎನ್ನುತ್ತಾರೆ.

ಬೆಲೆ ಕಡಿಮೆಯಾಗಿದ್ದು ಕೇಸರಿ ಬಗ್ಗೆ ರೈತರ ಆಸಕ್ತಿ ಕಡಿಯಾಗಲು ಪ್ರಮುಖ ಕಾರಣ. ಆದರೆ ಬೆಲೆ ಕಡಿಮೆ ಆಗಲು, ವ್ಯಾಪಾರಸ್ಥರ ಡೋಂಗಿ ವ್ಯವಹಾರವೇ ಕಾರಣ ಎನ್ನುತ್ತಾರೆ ಇಂತಿಹಾಜ್ ಭಟ್.
ವ್ಯಾಪಾರಸ್ಥರು ಏನೇನೋ ಸೇರಿಸಿ ಮಾರುತ್ತಾರೆ. ಬೆಲೆ ಇಳಿಯಲು ವಿದೇಶದಿಂದ ವಿಶೇಷವಾಗಿ ಇರಾನಿನಿಂದ ಆಮದಾಗುತ್ತಿರುವುದು, ಕೃತಕ ಕೇಸರಿಯ ಬಳಕೆ ಮೊದಲಾದ ಕಾರಣಗಳಿವೆ ಎನ್ನುತ್ತಾರೆ ಇಂತಿಹಾಜ್.

ಇತರ ಹೂವುಗಳ, ವಿಶೇಷವಾಗಿ ಜೋಳದ ಸಣ್ಣ ಕುಸುಮಗಳಿಗೆ ಕೃತಕ ಕೇಸರಿ ಬಣ್ಣ ಹಚ್ಚಿ ನಿಜ ಕೇಸರಿಯೊಂದಿಗೆ ಕಲಬೆರಕೆ ಮಾಡಿ ಮಾರುತ್ತಾರಂತೆ. 
ಒಮ್ಮೆ ನೆಟ್ಟ ಕೇಸರಿ ಗಡ್ಡೆ ಅದೇ ಹೊಲದಲ್ಲಿ ಎಂಟು ಹತ್ತು ವರ್ಷ ಇರುತ್ತದೆ.  ಆದರೆ ಹೀಗೆ ಮಾಡುವುದರಿಂದಲೇ ಇಳುವಳಿ ಕಡಿಮೆಯಾಗುತ್ತದೆ ಎನ್ನುತ್ತವೆ ಸರಕಾರಿ ಇಲಾಖೆಗಳ ಜಾಲತಾಣಗಳು. ಪ್ರತಿ ವರ್ಷ ಜೂನ್ ಮೊದಲವಾರದಲ್ಲಿ ಹೊಸದಾಗಿ ನೆಟ್ಟು ಬೆಳೆದರೆ ಹೆಚ್ಚು ಇಳುವರಿ ಸಾಧ್ಯ ಎನ್ನುತ್ತವೆ ಅಂತರ್ಜಾಲದ ಮಾಹಿತಿ. ಆದರೆ ಅದಕ್ಕೆ ಬೇಕಾಗುವ ಕಾರ್ಮಿಕರ ಸಂಖ್ಯೆ  ನೆನಪಿಸಿದರೆ, ಈ ಸರಕಾರಿ ಲೆಕ್ಕ ಬರೀ ಲೆಕ್ಕ  ರೈತ ಸ್ನೇಹಿ ಅಲ್ಲ ಅಂದೆನಿಸುತ್ತದೆ.


ಬಹು ಉಪಯೋಗಿ ಕೇಸರಿ:


ಕಾಶ್ಮೀರಿಗಳು ಕೇಸರಿಯನ್ನು ಹಲವಾರು ರೀತಿಯಲ್ಲಿ ಉಪಯೋಗಿಸುತ್ತಾರೆ. ಎಲ್ಲರ ಬಾಯಿಯೂ ಹಳದಿಯಾಗಿರುತ್ತದೆ. ಪಾನ್ ಎಂದರೆ ಅಡಿಕೆ ಹಾಕಿದ್ದನ್ನು ನೋಡಿದ್ದಿಲ್ಲ. ಕೇಸರಿ ಸಂಗಡ ಮತ್ತೇನನ್ನೋ ಸೇರಿಸಿ ತಿನ್ನುತ್ತಾರೆ. ಕಾಶ್ಮೀರಿಯರ ಜನಪ್ರಿಯ ಪೇಯ ಖಾವ್ವಾ. ಕೇಸರಿ, ಯಾಲಕಿ, ಲವಂಗ, ದಾಲ್ಚಿನ್ನಿ ನೀರಿಗೆ ಹಾಕಿ, ಕಾಯಿಸುತ್ತಾರೆ. ಅದಕ್ಕೆ ಸಣ್ಣಗೆ ಕತ್ತರಿಸಿದ  ಬಾದಾಮಿಯ ಬಾದಾಮಿಯ ಚೂರುಗಳನ್ನು ಹಾಕಿ ಕೊಡುತ್ತಾರೆ.  ಕಾಶ್ಮೀರದ ಛಳಿಗೆ , ದೇಹ ಬೆಚ್ಚಗಿಡಲು ಇದು ಒಳ್ಳೆಯ ಮದ್ದಂತೆ.  ಕೇಸರಿಯ ಔಷಧ ಗುಣಗಳ ಪಟ್ಟಿಯನ್ನೇ ನೀಡುತ್ತಾನೆ, ನೂರ್ ಮಹಮ್ಮದ್ ಭಟ್.

ನಾವು ಮಾತನಾಡಿಸಿದ ಬಹುತೇಕ ರೈತರ ಹೆಸರು ಭಟ್ ಎಂದೇ.  ಇತಿಹಾಸದ ಯಾವುದೋ ಕಾಲಘಟ್ಟದ ಬದಲಾವಣೆ.  ತಿರುಗಿ ಹೊರಡುವಾಗ, ’ನಾನೂ ರೈತ, ನಮಗೂ ನಾಲ್ಕು  ಗಡ್ಡೆ ಕೊಡುತ್ತೀರಾ?’ ಎಂದಿದ್ದಕ್ಕೆ  ಐವತ್ತು  ಗಡ್ಡೆ ಕಿತ್ತು,   ನನ್ನ  ಕಯಲ್ಲಿಟ್ಟು ’ನೆಡೋದು ನಮ್ಮ ಕೆಲಸ. ಮುಂದಿಂದು ಖುದಾನ ಇಚ್ಚೆ ಒಳ್ಳೇದಾಗಲಿ’ ಎಂದ.

ದಾರಿಯಂಚಿನ  ಅಂಗಡಿ:


ಹೆದ್ದಾರಿಯಂಚಿನಲ್ಲಿ ಸಣ್ಣ ಅಂಗಡಿ ಹಾಕಿ ಅಲ್ಲೇ ತಾನು ಬೆಳೆದ ಕೇಸರಿಯನ್ನು ಮಾರುತ್ತಾನೆ ನೂರ್ ಮಹಮ್ಮದ್ ಭಟ್. ಚಿಕ್ಕ ಅಂಗಡಿ. ಅಲ್ಲೇ ಕೆಸರಿಯ ಹೂವುಗಳನ್ನಿಟ್ಟು ಕೇಸರಿ ಬೆಳೆ ಬಗ್ಗೆ ಹೇಳುತಿದ್ದ. ಅದು ಆತನ ತಾತನ ಕಾಲದಿಂಡ ಬಂದ ಹೊಲವಂತೆ. ಇವನು ಬೆಳೆಗಿಂತ ಮಾರುವುದರಲ್ಲೇ ಹೆಚ್ಚು ಬ್ಯುಸಿ. ಗ್ರಾನಿಗೆ ಐವತ್ತರಿಂದ ನೂರೈವತ್ತರವರೆಗೆ ವಿವಿಧ ಗುಣಮಟ್ಟದ   ಕೇಸರಿ.

ಪಹಲ್ಗಾಂ ಊರಿಗೆ ಹೋದವರು ಪ್ರವಾಸಿಗರು ಹೋಗುವ ತಾಣಕ್ಕೆ ಹೋಗದೆ, ಹಳ್ಳಿ ಸುತ್ತಾಡುತ್ತಿದ್ದೆವು. ಕುಸುಮಾ ಹೂವಿನ ಗಿಡ ಹುಡುಕುತ್ತಿದ್ದಳು. ಅವಳ ಚೀಲದಲ್ಲಿ ಹೂವಿನ ಗಿಡಗಳು, ಬೀಜಗಳಿಂದ ತುಂಬುತ್ತಲೇ ಇತ್ತು.  ರಿಟರ್ನ್  ಟಿಕೆಟ್ ಇಲ್ಲದೇ ಬಂದಿದ್ದು ಒಳ್ಳೆಯದೇ ಆಗಿತ್ತು. ವಿಮಾನದಲ್ಲಿ ಇವನ್ನೆಲ್ಲ ತೆಗೆದುಕೊಂಡು ಸೆಕ್ಯುರಿಟಿ ಚೆಕ್ ನವರಿಗೆ, ಕಸ್ಟಮ್ಸ್ ನವರಿಗೆ ಉತ್ತರ ಕೊಡೋದು ಕಷ್ಟ ಇತ್ತು. ಯಾವುದೋ ಸಿಕ್ಕ ಟ್ರೇನಿಗೆ  ಲೊಕಲ್ ಟಿಕೆಟ್ ಖರೀದಿ ಹಿಂತಿರುಗುವ ಯೋಜನೆ ಮಾಡಿದ್ದೆವು. ಕಾಶ್ಮೀರದಲ್ಲಿ ನಮ್ಮ ಪ್ರಿ ಪೇಡ್ ಮೊಬೈಲ್ ನಿಂದ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಿಟರ್ನ್ ಟಿಕೆತ್ ಬುಕ್ ಮಾಡಲೂ ಸಾಧ್ಯವಾಗಲಿಲ್ಲ.

ಸೇಬು ಕೃಷಿ:


ನಮ್ಮ ಆಸಕ್ತಿ ಪ್ರವಾಸಿ ತಾಣವಲ್ಲ ಕೃಷಿ ಎಂದು ನಮ್ಮ ವಾಹನ ಚಾಲಕನಿಗೆ ಆಗಲೇ ಮನವರಿಕೆಯಾಗಿತ್ತು.  ಹಿಂತಿರುಗಿ ಬರುವಾಗ ಮುಖ್ಯ ರಸ್ತೆ ಬಿಟ್ಟು ಹಳ್ಳಿ ದಾರಿ ಹಿಡಿದ. ಹಳ್ಳಿ ಮೂಲೆ ಮೂಲೆ ಸುತ್ತಿಸಿ, ಸೇಬು ತೋಟಗಳೇ ತುಂಬಿದ ಊರಿಗ ಬಂದ.  ಉಳಿದ ಭಾಗದಲ್ಲಿ ಆಗಲೇ ಸೇಬು ಕೊಯ್ದು ಮುಗಿದಿತ್ತು. ಆದರೆ ಈ ಊರಿನಲ್ಲಿ ಸೇಬು ಇನ್ನೂ ಮರದ ಮೇಲಿತ್ತು. ಮರದ ಮೇಲಿದ್ದ ಸೇಬು ನೋಡಿ ಮತ್ತೆ ಅಲ್ಲೇ ಗಾಡಿ ನಿಲ್ಲಿಸಿ ತೊಟ ಸುತ್ತಾಡತೊಡಗಿದೆವು.  ೧೫ ೧೫ ಅಡಿ ಅಳತೆಯಲ್ಲಿ ಗಿಡಗಳು. ಒಂದು ಗಿಡದಲ್ಲಿ ಐದಾರು ನೂರು ಕಾಯಿಗಳು.  ತೋಟದ ಮಧ್ಯದಲ್ಲಿ  ಹುಕ್ಕಾ ಸೇದುತ್ತ ಕುಳಿತಿದ್ದ ರೈತ. 


ಹೂವ ತೋರಿಸಿ ಗಡ್ಡೆ ಮಾರುವವ:


ಶ್ರೀನಗರದ ಪ್ರಸಿದ್ದ ಸ್ಥಳ ದಾಲ್ ಸರೋವರ. ನಲವತ್ತು ಕಿಲೋಮೀಟರ್ ಕ್ಕಿಂತಲೂ ಹೆಚು ಸುತ್ತಳತೆ ಇರುವ ಈ ಕೆರೆ ಪ್ರವಾಸಿಗರ ಪ್ಪ್ರಮುಖ ಆಕರ್ಷಣೆ.
ಈ ಕೆರೆ ಒಂದರ್ಥದಲ್ಲಿ ನಗರದೊಳಗಿನ ನಗರವೇ ಸರಿ. ಈ ಕೆರೆಯಲ್ಲಿ ತೇಲುವ ಬೋಟ್ ಹೌಸ್ ಗಳಿವೆ. ಇವೇ ಅತಿಥಿಗೃಹಗಳು ಕೂಡ. ಐಶಾರಾಮಿ ಹೊಟೆಲುಗಳಂತೆ ಶೃಂಗರಿಸಿಕೊಂಡ ಇಂತ ಬೋಟ್ ಹೌಸ್‌ಗಳಲ್ಲೇ ಪ್ರವಾಸಿಗರು ಉಳಿಯುತ್ತಾರೆ. ಕೆರೆಯ ಮಧ್ಯೆ ತೇಲುವ ಸಂತೆ, ತೇಲುವ ಹೋಟೆಲು, ಕಾಶ್ಮೀರಿ ಘ್ರುಹ ಕೈಗಾರಿಕೆಗಳ ಅಂಗಡಿಗಳು, ತೇಲುವ ತರಕಾರಿ ತೋಟ, ಹೂವಿನ ತೋಟ, ಹೀಗೆ ಏನೆಲ್ಲ ಇದೆ. ಅದೇ ಒಂದು ಬೇರೆಯ ಲೋಕ.

ಕೆರೆಯಲ್ಲಿ ಸುತ್ತಾಡಲು ಸಣ್ಣ ಸಣ್ಣ ದೋಣಿಗಳಿಗಳಿವೆ. ಇಲ್ಲಿ ಇವುಗಳನ್ನು ಶಿಕಾರಾ  ಎಂದು ಕರೆಯುತ್ತಾರೆ. 
ಅಂಥ ಒಂದು ಸಣ್ಣ ಶಿಕಾರದ ಮೇಲೆ ಕುಳಿತು ನಾವೂ ಕೆರೆಯೊಳಗಿನ ನಗರದ ಶಿಕಾರಿಗೆ ಹೊರಟಿದ್ದೆವು. ಸ್ವಲ್ಪ ಹೊತ್ತಿನಲ್ಲೇ  ಒಬ್ಬ ಸಣ್ಣ ದೋಣೊಯಲ್ಲಿ ಒಬ್ಬ ಬಣ್ಣ ಬಣ್ಣದ ಹೂವುಗಳ  ಅಂದವಾಗಿ ಇಟ್ಟುಕೊಂಡು ಸುತ್ತಾಡುತ್ತಿದ್ದ. ಕುಸುಮಾ ಹೂವನ್ನು ಉದ್ದ ಕತ್ತು ಮಾಡಿ ನೋಡಿದ್ದೇ ತಡ. ಆತನ ಶಿಕಾರ ನಮ್ಮ ಹತ್ತಿರವೇ ಬಂತು. ಯಾವ ಹೂವಿನ ಗಡ್ಡೆ ಬೇಕು ಎಂದ. ಹೂವು ಮಾರುವವನಾಗಿರಲಿಲ್ಲ. ಆದರೆ ಹೂವನ್ನು ತೋರಿಸಿ ಗಡ್ಡೆ ಮಾರುವವನಾಗಿದ್ದ. ಶಿಕಾರಾದಲ್ಲಿ ಬಣ್ಣ ಬಣ್ಣದ ಹೂವುಗಳನ್ನು ತೋರಿಸಿ, ಆ ಹೂವಿನ ಗಡ್ಡೆ ಕೊಡು ಎಂದು ಕುಸುಮಾ ಹೇಳುತ್ತಿದ್ದಳು. ಈತ ತನ್ನ ಚೀಲದಿಂದ ಗಡ್ಡೆ ತೆಗೆದು ಕೊಡುತ್ತಿದ್ದ. ಯಾವ ಹೂವು ಯಾವ ಗಡ್ಡೆಯದೋ!, ದೇವರೇ ಬಲ್ಲ.  ನಾನಂತೂ ಕಳೆ ಗಿಡ ಆಗದಿದ್ದರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದೆ.

ದೇವರ ಕಾಯುವ ಮಿಲಿಟರಿ ಪಡೆ: ದೇವಸ್ಥಾನಗಳು ಇರುವುದೇ ಕಡಿಮೆ.  ಇದ್ದಲ್ಲೂ ಸಿ. ಆರ್. ಪಿ.ಎಫ್ ಪಡೆಗಳ ಬಿಗಿ ಪಹರೆಯಲ್ಲಿ ದೇವಾಲಯವನ್ನು ಸುತ್ತುವರೆದಿರುತ್ತವೆ. 

Wednesday, September 24, 2014

ಅಂಟೆ ಎಂಬ ಅಕ್ಷತ ನೆಲೆಗಳು

ನನಗಿನ್ನೂ ನೆನಪಿದೆ.  ಆಗ ನಾನಿನ್ನೂ ನಾಲ್ಕು ವರ್ಷದವನಿದ್ದನೇನೋ. ಇಡೀ ರಾತ್ರಿ ನಿದ್ದೆಯೇ ಬಂದಿರಲಿಲ್ಲ. ಬೆಳಿಗ್ಗೆ ಒಂದು ಅದ್ಭುತ ಲೋಕವನ್ನು ನೋಡಲು ಹೋಗಲು ಅನುಮತಿ ಸಿಕ್ಕಿತ್ತು. ಎಷ್ಟೆಲ್ಲ ದಿನಗಳಿಂದ ಅದಕ್ಕೆ ಕಾಯುತ್ತಿದ್ದೆ!

ಹಾಗೆ ಕಾತರದಿಂದ ಕಾಯುವಂತೆ ಮಾಡಿದ್ದು ಮತ್ತ್ಯಾವುದೂ ಅಲ್ಲ. ಅದು ’ಅಂಟೆ’ ಎನ್ನುವ ಕನಿಸಿನ ಲೋಕ. ಏಕೆಂದರೆ ಕಾಡಿನ ಮಧ್ಯೆ ಇದ್ದ ನಮ್ಮೂರಿನ ಎಲ್ಲರಿಗೆ ಏನು ಕೇಳಿದರೂ ’ಅಂಟೆ’  ಹೆಸರು ಹೇಳದೇ ಉತ್ತರ ಇರುತ್ತಿರಲಿಲ್ಲ.  ಅಜ್ಜ ನಂಗೊಂದು ಕೋಲು ಬೇಕು ಅಂದರೆ ಅಂಟೆಯಿಂದ ಒಳ್ಳೆ ಬೆತ್ತ ತಂದು ಮಾಡಿಕೊಡುತ್ತೇನೆ ಎನ್ನುತ್ತಿದ್ದ ಅಪ್ಪ. ಕೊಟ್ಟಿಗೆ ಸ್ವಚ್ಛ ಮಾಡುವ ಗಪ್ಪು ಈ ಹಿಡಿನೇ ಸರಿ ಇಲ್ಲ; ಈ ಬಾರಿ ಅಂಟೆಗೆ ಹೋದಾಗ ತರಬೇಕು ಅನ್ನುತಿದ್ದ.  ತೋಟಕ್ಕೆ ಬೇಲಿ ಕಟ್ಟಲು ಹೇಳಿದರೆ,  ಕಟ್ಟಿಗೆ ಕಡಿಯಲು ಉಪಯೋಗಿಸುವ ಕತ್ತಿ ತನ್ನ ಹರಿತ ಕಳೆದುಕೊಂಡರೆ ಕತ್ತಿ ಮಸೆಯುವ ಕಲ್ಲು ತರಲು, ತೋಟದಲ್ಲಿ ಕಾಳು ಮೆಣಸು ಕೊಯ್ಯುವ ಏಣಿಗೆ ಬಿದಿರು ತರಲು, ಹೀಗೆ  ಎಲ್ಲ ಉಪಯೋಗಕ್ಕೂ ಅಂಟೆಯ ಹೆಸರು ಕೇಳಿ ಬರುತ್ತಿತ್ತು.

ಮಳೆಗಾಲದಲ್ಲಿ ಸುರೀತಾ ಇರೋ ಮಳೆ ಮಧ್ಯೆ, ಕಂಬಳಿ ಕೊಪ್ಪೆ ಸೂಡಿಕೊಂಡು,  ಅದರೂ ಮೈ ಎಲ್ಲ ಒದ್ದೇ ಮಾಡಿಕೊಂಡು,  ಅಜ್ಜಿ, ಆಯಿ ಎಲ್ಲ ಆ ಮಳೆಯಲ್ಲೇ ಉಪ್ಪಗೆ ಬೀಜ ಆರಿಸಲು ಅಂಟೆಗೆ ಹೋಗುತ್ತಿದ್ದರು. ಕೆಲವೊಮ್ಮೆ ದೂರದ ನೆಂಟರೂ ಚೌತಿಗೆ  ಒಂದಿಷ್ಟು ಉಪ್ಪಗೆ ತುಪ್ಪ ಮಾಡಲು ಬೀಜ ಆರಿಸಲು ಆ ಮಳೆಗಾಲದಲ್ಲೇ ಬರುತ್ತಿದ್ದರು. ಅವರೆಲ್ಲ, ಇಡೀ ದಿನ ಸುತ್ತಾಡಿ, ಒಂದು ಸಣ್ಣ ಚೀಲದಲ್ಲಿ ಉಪ್ಪಗೆ ಬೀಜ ಹೆಕ್ಕಿಕೊಂಡು, ಒದ್ದೆ ಮೈಯನ್ನು ಒಣಗಿಸಲು  ಹೊಡಸಲಿನ  ಎದುರು ಕುಳಿತು ಅಂಟೆಯ ಸುದ್ದಿ ಹೇಳುವಾಗ ಅದೊಂದು ಮಾಯಾಲೋಕ ಎಂದು ಅನಿಸುತ್ತಿತ್ತು.

ಜೇನುತುಪ್ಪ, ರಾಮಪತ್ರೆ, ಧೂಪ, ಎಲ್ಲವೂ ಅದೇ ಅಂಟೆಯಿಂದಲೇ ಬರುತ್ತಿತ್ತು.

ನಮ್ಮ ಮನೆಯ ಎಷ್ಟೋ ದನಕರುಗಳು ಹುಲಿಯ ಬಾಯಿಗೆ ಬಿದ್ದದ್ದು ಅವು ಈ ಅಂಟೆಗೆ ಹೋದಾಗಲೇ. ಒಮ್ಮೆ ಜೇನು ಹಿಡಿಯಲು, ದಳ್ಳೆ(ದೊಡ್ಡ ಪಾತ್ರೆ), ದೊಂದಿ ಎಲ್ಲ ಹೊತ್ತು ಹೋದ ಹತ್ತಾರು ಜನರ ತಂಡ, ಇನ್ನೇನು ಜೇನು ಮರ ಹತ್ತಬೇಕು ಎನ್ನುವಷ್ಟರಲ್ಲಿ, ಮರದ ಮೇಲಿದ್ದ ಕರಡಿಯನ್ನು ಕಂಡು ಹಿಂತಿರುಗಿ ಓಡಿ ಬಂದಿತ್ತು.

ಅಂಥ ಕಾಡಿನ ನಡುವೆಯೇ ಘಟ್ಟ ಹತ್ತಿ ಪ್ರತಿ ದಿನ ಬರುತ್ತಿದ್ದ ಮೊರ್ಸೆ ಮಾಸ್ತರರು ನಿಜವಾದ  ಹೀರೋ ಆಗಿದ್ದರು.

ಅಂಥ ಕನಸಿನ ಅಂಟೆಗೆ ಮರುದಿನ ಬೆಳಿಗ್ಗೆ ಹೋಗಲು ಅಪ್ಪನಿಂದ ಅನುಮತಿ ಸಿಕ್ಕಿತ್ತು. ಆ ಕುತೂಹಲದಲ್ಲಿ ರಾತ್ರಿ ನಿದ್ದೆಯೇ ಬಂದಿರಲಿಲ್ಲ.

ದೇವಸ್ಥಾನದ ಒಡವೆಗಳನ್ನು ಕದ್ದ ಕಳ್ಳ ಅವುಗಳನ್ನು ಅದೇ ಅಂಟೆಯಲ್ಲಿ ಅಡಗಿಸಿ ಇಟ್ಟಿದ್ದಾನೆ ಅಂತ ಯಾರೋ ಭವಿಷ್ಯ ಹೇಳಿದ್ದರಂತೆ. ಅದನ್ನು ಹುಡುಕಲು ಊರಿನ ಎಲ್ಲ ಹೋಗುವವರಿದ್ದರು. ಹಾಗಾಗಿ ನನಗೂ ಹೋಗಲು ಅನುಮತಿ ಸಿಕ್ಕಿತ್ತು. ಕಳೆದದ್ದು ಸಿಕ್ಕಿದೆಯೋ ಇಲ್ಲವೋ ನೆನಪಿಲ್ಲ; ಆದರೆ ಅಂದು ನೋಡಿದ ಅಂಟೆಯ ನೆನಪು ಮಾತ್ರ ಇನ್ನೂ ಹಸಿರಾಗಿದೆ.

ಸೂರ್ಯನೇ ಕಾಣದ ಕಾಡು, ನೀರು, ಜಲಪಾತ, ತಲೆಯೇ ಕಾಣದ ಮರಗಳು, ಎಷ್ಟು ಸುತ್ತಿದರೂ ಆಯಾಸವಾಗಿರಲಿಲ್ಲ.

ಅಂಟೆ ಎಂದರೆ, ಪಶ್ಚಿಮ ಘಟ್ಟದ ಇಳಿಜಾರು ಪ್ರದೇಶ. ದಟ್ಟ ನಿತ್ಯ ಹರ್ದ್ವರ್ಣ ಕಾಡು ಇರುವ ಈ ಪ್ರದೇಶ ಜೀವ ವೈವಿಧ್ಯದ ತಾಣವೂ ಹೌದು. ಅಲ್ಲಿ ಸಿಗುವ ಹಲವಾರು ಅರಣ್ಯ ಉತ್ಪನ್ನಗಳ ಉಪಯೋಗ ಅಲ್ಲೇ ಬದುಕುವ ನಮ್ಮಂತಹ ಜನರಿಗೆ ಅನಿವಾರ್ಯವಾಗಿತ್ತು. ಅಲ್ಲಿನ ಉಂಬಳ, ಜಲಪಾತಗಳು, ನೀರು, ದಟ್ಟ ಕಾಡು, ಚಿರತೆ, ಕಡವೆ, ಕಾಡುಕುರಿ, ಬರ್ಕ,  ಎಲ್ಲ ವಿಶಿಷ್ಟ ಅನುಭವ ನೀಡುತ್ತಿದ್ದರಿಂದ ಅಲ್ಲಿಗೆ ಹೀಗೆ ಹೋಗಿ ಬಂದವರು ಆ ವಿಷಯವಾಗಿ ರೋಚಕ ಕಥೆ ಹೇಳುತ್ತಿದ್ದರು.

ಒಂದು ದಿನ ಅಂಥ ಅಂಟೆಯ ನಡುವೆಯಿಂದಲೇ ಒಬ್ಬ ಹಿರಿಯ ನಮ್ಮ ಮನೆಗೆ ಬಂದಿದರು.  ಸರಿಯಾಗಿ ಕನ್ನಡವೂ ಬಾರದ ಅವರು ಹೇಗೆ ಬಂದರು ಎನ್ನುವುದೇ ನಮ್ಮ ಪ್ರಶ್ನೆಯಾಗಿತ್ತು. ದೂರದ ಪುಣೆಯಿಂದ ಇಲ್ಲಿರುವ ಅಯಾವುದೋ ಮಂಗನನ್ನು ಹುಡಿಕಿ ಬಂದಿದ್ದೇನೆ ಎಂದಾಗ ನಮಗೆ ಆಶ್ಚ್‌ರ್ಯ. ಅವರು ಸಿಂಗಳೀಕಗಳನ್ನು ಹುಡುಕಿ ಬಂದಿದ್ದರು. ಮುಂದೆ ಆ ಸಿಂಗಳೀಕಗಳು ನಮ್ಮ ಕಾಡಿನಲ್ಲಿ ಮಾತ್ರ ಇರುವ ಜೀವಿಗಳು ಎಂದು ಗೊತ್ತಾದಾಗ ಸಹಜವಾಗಿ ಹೆಮ್ಮೆ.

ಇವುಗಳ ನಡುವೆಯೇ ನಮ್ಮ ಮನೆ ಎದುರು ಪ್ರತಿ ದಿನ ಜೀಪೊಂದು ಬಂದು ನಿಲ್ಲಲು ಪ್ರಾರಂಭವಾಗಿತ್ತು. ಅವರನ್ನು ಸರ್ವೇಯವರು ಎಂದೇ ಎಲ್ಲ ಕರೆಯುತ್ತಿದ್ದರು. ಜನ ಅವರನ್ನು ಆತಂಕದಿಂದ ನೋಡ್ತಾ ಇದ್ರು. ಅವರು ಮನೆ ಮುಳುಗಿಸ್ತಾರಂತೆ ಅಂತ ಹೇಳೋ ಕಥೆ ನನಗೆ ಅರ್ಥವಾಗ್ತಿರಲಿಲ್ಲ. ಒಂದು ದಿನ ಆ ಜೀಪನ್ನೇ ತಡೆದು ಚಳಿವಳಿ ಶುರು ಮಾಡಿದ್ದಾರೆ ಅನ್ನುವ ಸುದ್ದಿ ಬಂತು . ನಮ್ಮ ಮನೆಯಿಂದಲೂ ಜನ ಹೋಗಿದ್ದರು.  ಆವತ್ತು ನನಗೆ ಸ್ವಲ್ಪ ಬೇಜಾರು ಆಗಿತ್ತು ; ಯಾಕೆಂದರೆ ಆ ಜೀಪಿನ ಡ್ರೈವರ್ ದಿನಾ ತಂದು ಕೊಡುತ್ತಿದ್ದ ಪೇಪ್ಪರ್ಮಿಂಟ್ ನನಗೆ ತಪ್ಪಿಹೋಗುತ್ತದೆ ಎಂದು. ಆ ಜೀಪು ಅಘನಾಶಿನಿ ಜಲವಿದ್ಯುತ್ ಯೋಜನೆಗಾಗಿ ಸರ್ವೆ ನಡೆಸುವ ಕಾರ್ಯವಾಗಿತ್ತು ಎಂದು ನನಗೆ ಗೊತ್ತಾದದ್ದು ತುಂಬಾ ವರ್ಷಗಳ ನಂತರ. 

ಕಳೆದ ನಾಲ್ಕು ದಶಕಗಳಲ್ಲಿ ನಿರಂತರವಾಗಿ ಪರಿಸರ ವಿನಾಶೀ ಯೋಜನೆಗಳು ಇಲ್ಲಿ ಪ್ರಸ್ತಾಪವಾಗುತ್ತಲೇ ಇವೆ. ಅವುಗಳ ವಿರುದ್ದದ ಹೋರಾಟದ ನಡುವೆಯೇ ನಾನು ಬೆಳೆದದ್ದು.


ಹೀಗಿರುವ ಅಂಟೆಗೆ ಅಪಾಯ ಬಂದಿದೆ ಎಂದು ಗೊತ್ತಾದಾಗ ಆತಂಕವಾದದ್ದು ಸಹಜ. ಉದ್ಯೋಗ, ಶಿಕ್ಷಣ ಅಂತೆಲ್ಲ ಹೊರಗಡೆ ಸುತ್ತಾಡುವಾಗ ಇದೇ ನೆನಪುಗಳು ಮತ್ತೆ ಮತ್ತೆ ಕಾಡುತ್ತಿದ್ದವು. ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್  ಸೈನ್ಸ್ ಎಂದು ನಗರದಲ್ಲಿ ಕಳೆದು ಹೊಗಬಹುದಾಗಿದ್ದ ಬದುಕನ್ನು ಮತ್ತೆ ಕಾಡಿಗೆ ತಂದದ್ದು ಅದೇ ನೆನಪುಗಳು. ಅದೇ ಪ್ರದೆಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಅಧ್ಯಯನ ವರದಿ ತಯಾರಿಸುವ ಕೆಲಸ ನನ್ನ ಜೀವನದ ಅತ್ಯಂತ ಖುಷಿ ಕೆಲಸ. ಈ ಅಂಟೆಯನ್ನು ನಿರಂತರವಾಗಿ ಉಳಿಸುವ ಕೆಲಸ ಇದರಿಂದ ಸಾಧ್ಯವಾಗುತ್ತದೆ ಎನ್ನುವುದೇ ಹೆಮ್ಮೆಯ ವಿಷಯ.

ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ; ಮೈಸೂರು, ದೆಹಲಿ, ಜರ್ಮನಿ ಮೊದಲಾದ ಕಡೆಗಳಲ್ಲಿ ಸಿಕ್ಕ ಉದ್ಯೋಗಾವಕಾಶವನ್ನು ಬದಿಗಿಟ್ಟೂ ಹಳ್ಳಿಗೆ ಬಂದು ಸಂರಕ್ಷಣೆ ಕೆಲಸಕ್ಕೆ ತೊಡಗಿಕೊಳ್ಳಬೇಕೆಂದು ಕೊಂಡಿದ್ದು ಬೇರಾವ ಭಾರೀ ಧ್ಯೇಯದಿಂದಲ್ಲ. ನಾನು ಕಂಡ ಈ ’ಅಂಟೆ’  ಇನ್ನೂ ಉತ್ತಮವಾಗಿ ಅಲ್ಲದಿದ್ದರೂ, ಕೊನೇ ಪಕ್ಷ ಅದೇ ರೀತಿಯಲ್ಲಾದರೂ ಇರಲಿ  ಎನ್ನುವ ನನ್ನ ಸ್ವಾರ್ಥ ಮಾತ್ರ. 

Sunday, January 9, 2011

ಅಡಿಕೆ ಮರದ ಪೀಠೋಪಕರಣ ಉದ್ಯಮ

'ಅದು ಮೌಲ್ಯವರ್ಧನೆಯಲ್ಲ; ಮೌಲ್ಯಹಾನಿ' ಎದುರಿಗೆ ಕುಳಿತ ಎಪ್ಪತ್ತು ವರ್ಷದ ಹಿರಿಯ ಝಜೌ ಹೇಳಿದಾಗ ಪೆಚ್ಚಾಗಿ ಬಿಟ್ಟೆ. ಝುಜೌ ಚೀನಾದ ಗ್ರಾಮೀಣಾಭಿವೃದ್ಧಿಯ  ಮಾದರಿ  ರೂಪಿಸಿದ ಹಿರಿಯ.   ಜಗತ್ತನ್ನೆಲ್ಲ  ಸುತ್ತಾಡಿದ  ಅನುಭವ. 'ಹೈನಾನ್ ಪ್ರಾಂತ ನೋಡಿದ್ದೇನೆ' ಎಂದು ನನ್ನೊಡನೆ ಹೇಳಿದ ಮೊದಲ ಚೀನೀಯ. ಚೀನೀ ಅಡಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಸಿಗಬಹುದೆಂದುಕೊಂಡು, ಅವರೊಡನೆ ಮಾತಿಗೆ ಕುಳಿತಿದ್ದೆ.
ಅಡಿಕೆಯ ಮೌಲ್ಯವರ್ಧನೆ ಎಂದ ತಕ್ಷಣ ನೆನಪಿಗೆ ಬರೋದು ಅಡಿಕೆ ಹಾಳೆಯ ದೊನ್ನೆ ಮತ್ತು ಪ್ಲೇಟ್ ತಾನೆ? ಅವರನ್ನು ಮಾತಿಗೆ ಎಳೆಯಲು ಹೆಮ್ಮೆಯಿಂದ ನಮ್ಮೂರಿನ ಈ ಉತ್ಪನ್ನಗಳ ಬಗ್ಗೆ ಹೇಳತೊಡಗಿದ್ದೆ. ಶುರು ಮಾಡಿ ಒಂದೇ ನಿಮಿಷದಲ್ಲಿ ಮುಖಕ್ಕೆ ಹೊಡೆದಂತೆ ಮೇಲಿನ ಮಾತು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ನಾನು ತಬ್ಬಿಬ್ಬಾಗಿ ಕುಳಿತಿದ್ದೆ.
'ನೈಸರ್ಗಿಕ ವಿನೀರ್ ಅದು. ಅದನ್ನೇಕೆ ಪ್ಲೈವುಡ್ ತಯಾರಿಯಲ್ಲಿ ಉಪಯೋಗಿಸ ಬಾರದು?' ಎಂದು ಕೇಳಿದರು. ಹೌದಲ್ಲವೇ? ಮೌಲ್ಯವರ್ಧನೆ ಎಂದರೆ ಒಂದು ವಸ್ತುವಿನ ಬೆಲೆಯನ್ನು ಎಷ್ಟು ಹೆಚ್ಚು ಮಾಡಲು ಸಾಧ್ಯ ಎಂದು ಪ್ರಯತ್ನಿಸುವುದು. ಕೇವಲ ರೂಪ ಬದಲಿಸುವುದಲ್ಲವಲ್ಲ!
ಪಿಡಿಎಫ್ ರೂಪದಲ್ಲಿ ಓದಲು ಅಡಿಕೆ ಪತ್ರಿಕೆಯ ಜಾಲತಾಣ http://www.adikepatrike.com/ ಗೆ ಬೇಟಿ ಕೊಡಿ.


Sunday, December 19, 2010

ವೇನಿಸ್ ಎಂಬ ಮುಳುಗುತ್ತಿರುವ ನಗರ

ಇತಿಹಾಸದ ವ್ಯಂಗ್ಯ ನೋಡಿ. ಒಮ್ಮೆ ಇಡೀ ಜಗತ್ತಿನ ವ್ಯಾಪಾರದ ಕೇಂದ್ರ ಬಿಂದುವಾದ ವೆನೀಸ್ ಇಂದು
ಕೇವಲ ಒಂದು "ಸತ್ತು ಹೋದ ನಗರ".
ಶತಮಾನದ ಹಿಂದೆ ಭಾರತ ಮತ್ತಿತರ ಏಷ್ಯಾದ ದೇಶಗಳಿಂದ
ಯುರೋಪಿಗೆ ಹೋಗುತ್ತಿದ್ದ ಸಂಬಾರ ಪದಾರ್ಥಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.
ಯುರೋಪಿನ ಇತಿಹಾಸದಲ್ಲಿ ವೆನೀಸಿಗೆ ಪ್ರಮುಖ ಸ್ಥಾನ. ಅದು ವ್ಯವಹಾರಗಳ ಕೇಂದ್ರವಾಗಿತ್ತು.

"ಮರ್ಚಂಟ್ಸ್ ಆಫ್ ವೆನಿಸ್" ಶೇಕ್ಸ್ ಪೀಯರನ ಪ್ರಮುಖ ನಾಟಕ.
ಇಲ್ಲಿನ ವ್ಯಾಪಾರ, ಅದರೊಂದಿಗೆ ಸೇರಿದ ಮೋಸ, ವರ್ಗ ಸಂಘರ್ಷ, ಹೀಗೆ ಏನೆಲ್ಲ ಆ ಕಾಲದ ಸೆಳಕುಗಳನ್ನು ತೆರೆದಿಡುತ್ತದೆ ಆ ನಾಟಕ.ಆ ನಾಟಕದ ನೆನಪಿನಲ್ಲಿ ಈ ಊರಿಗೆ ಹೋದರೆ ಅಲ್ಲಿ ಇರೋದು ಬರೀ ಪ್ರವಾಸೋದ್ಯಮ ಮಾತ್ರ. ನಗರ ಹಾಳು ಬಿದ್ದಿದೆ. ಸಮುದ್ರದ
ನಡುವಿನ ಮರಳ ರಾಶಿಯಲ್ಲಿ ನಿಂತಿದ್ದ ನಗರ ನೀರಿನಲ್ಲಿ ಕುಸಿಯುತ್ತಿದೆ; ಇತಿಹಾಸದ ಹಾಗೆ!.

"ಅದು ಈಗ ಬದುಕಿರುವುದು ಕೇವಲ ಪ್ರವಾಸೋದ್ಯಮದ ಮೇಲೆ. ಹಾಗಾಗಿ ಕ್ರತಕವಾಗಿ ಆ ನಗರವನ್ನು
ಬದುಕಿದಂತೆ ತೋರಿಸಲಾಗುತ್ತಿದೆ" ಎನ್ನುತ್ತಾರೆ ಇಟಲಿಯ ಅಂತಾನಿಯೋ.
ಇಟಲಿಯ ದಕ್ಷಿಣ ತುದಿಯ ನಗರದ ಒಂದಿಷ್ಟು ನೋಟ, ನಿಮಗಾಗಿ.

Sunday, December 5, 2010

ಔಷಧದಲ್ಲಿ ಅಡಿಕೆ

ಚೀನಾದಲ್ಲಿ ಅಡಿಕೆ ಔಷಧಗಳ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಬರೆದ ಎರಡನೇ ಲೇಖನ ಇಲ್ಲಿದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. .pdf ರೂಪದಲ್ಲಿ ಅಡಿಕೆ ಪತ್ರಿಕೆಯ ಜಾಲತಾಣದಿಂದಲೂ ಓದಬಹುದು.
http://www.adikepatrike.com/






Saturday, November 13, 2010

"ಬಿಂಗಲಾಂಗ" ಬೆನ್ನುಹತ್ತಿ! -ಚೀನಾದಲ್ಲಿ ಅಡಿಕೆಯ ಹುಡುಕಾಟ

ಚೀನಾ ಪ್ರವಾಸದ ಸಮಯದಲ್ಲಿ ನಮ್ಮ ರೈತ ಸಮುದಾಯಕ್ಕೆ ಬೇಕಾದ ಅನುಭವಗಳನ್ನು "ಅಡಿಕೆಪತ್ರಿಕೆ"ಯಲ್ಲಿ "ಡ್ರಾಗನಿನ ನಾಡಿನಲ್ಲಿ" ಎನ್ನುವ ಹೆಸರಿನ ಲೇಖನ ಮಾಲೆಯನ್ನು ಬರೆಯಲು ಅವಕಾಶಮಾಡಿಕೊಟ್ಟಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ. ಅವಕಾಶ ಮಾಡಿಕೊಟ್ಟು ಬರೆಯಲುಹುರಿದುಂಬಿಸುತ್ತರಿವ "ಶ್ರೀ" ಪಡ್ರೆ ಯವರಿಗೆ ಮತ್ತು ಅಡಿಕೆ ಪತ್ರಿಕೆ ಬಳಗಕ್ಕೆ, ಅಡಿಕೆಯಹುಡುಕಾಟಕ್ಕೆ ಸಹಾಯ ಮಾಡಿ, ಪ್ರೋತ್ಸಾಹಿಸಿದ ಕ್ಯಾಂಪ್ಕೋ ಸಂಸ್ಥೆಗೆ ಧನ್ಯವಾದಗಳು.


ನೇರವಾಗಿ ಅಡಿಕೆ ಪತ್ರಿಕೆಯ ಜಾಲತಾಣದಿಂದ (http://www.adikepatrike.com/) pdf ನಂತೆ ಡೌನಲೋಡ್ಮಾಡಿಯೂ ಓದಬಹುದು.
















ಚೀನಾದಲ್ಲಿ ಅಡಿಕೆ - ಲೋಕಧ್ವನಿ ವರದಿ


ಚೀನಾದಲ್ಲಿ ಅಡಿಕೆಯ ಮೌಲ್ಯವರ‍್ಧನೆಯ ಬಗ್ಗೆ ಸಿರಸಿಯ ಟಿ.ಎಸ್.ಎಸ್ ಸಂಸ್ಥೆಯಲ್ಲಿ ಮಾತನಾಡಲು ಅವಕಾಶವಾಗಿತ್ತು. ಅದರ ವರದಿ ಲೋಕಧ್ವನಿಯಲ್ಲಿ ಪ್ರಕಟವಾಗಿದ್ದು ಹೀಗೆ.
ಲೋಕಧ್ವನಿ ಬಳಗಕ್ಕೆ, ಕಾರ‍್ಯಕ್ರಮಕ್ಕೆ ಕಾರಣರಾದ ಮಿತ್ರ ಶಿವಾನಂದ ಕಳವೆಯವರಿಗೆ,ಟಿಎಸ್ ಎಸ್ ಅಧ್ಯಕ್ಕರಾದ ಶಾಂತಾರಾಮ ಹೆಗಡೆಯವರಿಗೆ, ಮತ್ತಿತರಿಗೆ ಧನ್ಯವಾದಗಳು.




Saturday, October 30, 2010

ಸಂರಕ್ಷಣೆಯ ಹಾದಿ

ನನಗಿನ್ನೂ ನೆನಪಿದೆ; ನಮ್ಮ ಮನೆ ಅಂಗಳದಲ್ಲಿ ಪ್ರತಿದಿನ ಬಂದು ನಿಲ್ಲುತ್ತಿದ್ದ ಆ ಜೀಪು. ನಾನಾಗ ತುಂಬಾ ಸಣ್ಣವನಿದ್ದೆ. ಶಾಲೆಗೆ ಸಹ ಹೋಗುತ್ತಿರಲಿಲ್ಲ. ಆ ಜೀಪಿಗಾಗಿ ನಾನು ಕಾತರದಿಂದ ಕಾಯುತ್ತಿದ್ದೆ. ಕಾರಣ ಮತ್ತೇನಲ್ಲ; ಆ ಜೀಪಿನ ಡ್ರೈವರ್ ನನಗೆ ಚಾಕೊಲೇಟ ತರುತ್ತಿದ್ದ. ಒಂದು ದಿನ ಆ ಜೀಪನ್ನು ದಾರಿಯಲ್ಲಿ ಅಡ್ಡಗಟ್ಟಿ ಜನರೆಲ್ಲ ಪ್ರತಿಭಟಿಸುತ್ತಾರೆ ಎಂದಾಗ ನನಗೆ ಪಿಚ್ಚೆನಿಸಿತ್ತು.


ಜೀಪು ಅಘನಾಶಿನಿ ಕಣಿವೆಯಲ್ಲಿ ಜಲ ವಿದ್ಯುತ ಯೋಜನೆಗೆ ಸರ್ವೆ ಮಾಡಲು ಬರುವ ಅಧಿಕಾರಿಗಳದ್ದಾಗಿತ್ತು. ನಮ್ಮ ಮನೆ ಹತ್ತಿರವೇ ಅಘನಾಶಿನಿ ಯೋಜನೆಯ ವಿದ್ಯುತ ಘಟಕ ಯೋಜಿತವಾಗಿದ್ದರಿಂದ ತುಂಬಾ ದಿನಗಳವೆರೆಗೆ ಸರ್ವೆ ಕಾರ್ಯ ನಡೆಯುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಇರುವ ಮತ್ತು ಪ್ರಸ್ತಾಪಿಸಲಾದ ಯೋಜನೆಗಳು

ಬೇಡ್ತಿ ಅಘನಾಶಿನಿ ಯೋಜನೆಗಳು ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡದ ಜನರನ್ನು ಕಾಡುತ್ತಿರುವ ಸಮಸ್ಯೆ. ತೀರ ಇತ್ತೀಚೆಗೆ ಸಹ ಮತ್ತೆ ಪ್ರಸ್ತಾಪವಾಗಿತ್ತು. ಈ ಪ್ರದೇಶದ ಸರಿ ಸುಮಾರು ಎರಡು ತಲೆಮಾರು ಈ ಯೋಜನೆಗಳ ಭಯದಲ್ಲೇ ಬದುಕಿವೆ. ಎಷ್ಟೊತ್ತಿಗೆ ಊರು ಬಿಟ್ಟು ಹೊರಡಬೇಕಾದ ಪರಿಸ್ಥಿತಿ ಬರಬಹುದೆಂದೆನ್ನುವ ಆತಂಕದಲ್ಲಿ ಕಳೆದಿದ್ದಾರೆ.

ಈಗ ಕಳೆದ ಅಗಷ್ಟ ತಿಂಗಳಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಭಾಗದ ಜನ ನೆಮ್ಮದಿಯ ನಿಟ್ಟಿಸಿರು ಬಿಡುವ ಸುದ್ದಿ ಹೊರ ಬಿದ್ದಿದೆ. ಎಲ್ಲ ಸುಗಮವಾಗಿ ನಡೆದರೆ, ಇನ್ನು ಅಂಥ ಭಾರೀ ಯೋಜೆಗಳು ಪ್ರಸ್ತಾಪವಾಗಲಾರವು ಎನ್ನುವ ಭರವಸೆ ಮೋಡಿದೆ. ಈ ಪ್ರದೇಶವನ್ನು "ಸಂರಕ್ಷಣಾ ವಲಯ " ಎಂದು ಘೋಷಿಸಲು ನಿರ್ಧರಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳು

2007ರಲ್ಲಿ ಸ್ವರ‍್ಣವಲ್ಲಿಯಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಇಡೀ ಉತ್ತರ ಕನ್ನಡವನ್ನು "ಸೂಕ್ಷ್ಮ ಪ್ರದೇಶ" ಎಂದು ಘೋಷಿಸುವ ಬಗ್ಗೆ. ಹಿರಿಯ ಲೇಖಕರಾದ ಶ್ರೀ ನಾಗೇಶ ಹೆಗಡೆಯವರೂ ಸೇರಿದಂತೆ ಹಲವು ವಿಜ್ಞಾನಿಗಳು, ಪರಿಸರಾಕ್ತರು ಆ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ನಮ್ಮ ಕ್ರಿಯಾಶೀಲ ಸಂಸದ ಅನಂತಕುಮಾರ ಹೆಗಡೆಯವರು ಜಿಲ್ಲೆಯನ್ನೇ "ಜೈವಿಕ ಸೂಕ್ಷ್ಮ ಪ್ರದೇಶ (Biosphere Reserve) ಎಂದು ಗುರುತಿಸುವ ಪ್ರಸ್ತಾವೆಯನ್ನು ಸಲ್ಲಿಸಲು ಅಸಕ್ತಿ ತಾಳಿದ್ದರು. ಅದೊಂದು ಒಳ್ಳೆಯ ನಡೆಯಾಗಿತ್ತು. ಆದರೆ ಉತ್ತರ ಕನ್ನಡದಂಥ ಇಡೀ ಜಿಲ್ಲೆಯನ್ನು ಹೀಗೆ ಘೋಷಿಸುವ ಸಾಧ್ಯತೆಗಳು ಕಡಿಮೆ ಇದ್ದವು. ಯುನೆಸ್ಕೋದ ಒಂದು ಯೋಜನೆ ಮಾತ್ರ ಆದ, ಭಾರತದ ಯಾವುದೇ ಕಾನೂನಿನಲ್ಲಿ ಮಾನ್ಯತೆ ಇಲ್ಲದ, ಇಂಥ ಯೋಜನೆ ಅಂತರಾಷ್ಟ್ರೀಯ ಮಟ್ಟದ ಹೆಸರಿಗೆ ಉಪಯುಕ್ತವಾದರೂ, ಇಂಥ ಭಾರೀ ಯೋಜನೆಗಳನ್ನು ನಿಲ್ಲಿಸುವಲ್ಲಿ ನ್ಯಾಯಾಲಯಗಳಲ್ಲಿ ಹೋರಾಡಲು ಶಕ್ಯವಾಗಿಲ್ಲವಾಗಿತ್ತು. ನಾನು ಜಿಲ್ಲೆಯ ಸಂರಕ್ಷಣಾ ಮಹತ್ವದ ೧೦ ಪ್ರಮುಖ ತಾಣಗಳನ್ನು ಆಯ್ಕೆ ಮಾಡಿ, ಈಗಿರುವ ಕಾನೂನುಗಳಡಿಯಲ್ಲಿ, ಸಣ್ಣ ಸಣ್ಣ ಪ್ರದೇಶಗಳನ್ನು ಸಂರಕ್ಷಿಸುವ ಕಾರ‍್ಯ ಹೆಚ್ಚು ಸುಲಭವಾಗಿ ಕಾರ‍್ಯ ಸಾಧ್ಯವೇನೋ ಎಂದಿದ್ದೆ. ಹಾಗೆ ಆಯ್ಕೆ ಮಾಡಿದ ಪ್ರದೇಶಗಳ ನಕ್ಷೆಯನ್ನು ನೋಡಿ.

ಹಾಗಾಗಿ ವನ್ಯ ಜೀವಿ ಸಂರಕ್ಷಣಾ ಕಾನೂನಿನಲ್ಲಿ ೨೦೦೬ರಲ್ಲಿ ೩೬ ಅ ದಂತೆ ಸೇರಿಸಿದ " ಸಂರಕ್ಷಣಾ ವಲಯ" ಎನ್ನುವ ಹೊಸ ವ್ಯವಸ್ಥೆ, ಕಾಡಿನ ಮಧ್ಯದಲ್ಲಿ ಮನುಷ್ಯರು ಬಾಳುತ್ತಿರುವ ನಮ್ಮಂಥ ಪ್ರದೇಶಗಳಿಗೆ ಸೂಕ್ತ. ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನದ ಹಾಗೆ ಮನುಷ್ಯರನ್ನು ಹೊರಗಿಟ್ಟು ಸಂರಕ್ಷಿಸುವುದಕ್ಕಿಂತ ಸ್ಥಳೀಯರೊಂದಿಗಿನ ಸಂರಕ್ಷಣಾ ವ್ಯವಸ್ಥೆ ಇದು.


ನಂತರ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ಅನಂತ ಅಶೀಸರ ಅವರು ಇದನ್ನು ಪ್ರಮುಖ ಕಾರ‍್ಯಕ್ರಮವಾಗಿ ತೆಗೆದುಕೊಂಳ್ಳಲು ಆಸಕ್ತಿ ವಹಿಸಿದರು. ಅರಣ್ಯ ಭವದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನನಗೆ ಮಾತನಾಡಲು ಅವಕಾಶವನ್ನೂ ಒದಗಿಸಿದರು. ವಿಸ್ತ್ರತ ವರದಿ ತಯಾರಿಸುವ ಜವಾಬ್ದಾರಿಯೂ ನನಗೇ ಬಂತು. ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಮನೋಜಕುಮಾರ ಅವರೊಂದಿಗೆ ತಯಾರಿಸಿದ ವರದಿ ಈಗ ವನ್ಯ ಜೀವಿ ಮಂಡಳಿಯಲ್ಲಿ ಅನುಮೋದನೆ ಪಡೆದಿದೆ.

ದಾಂಡೇಲಿಯ ಹಾರ್ನಬಿಲ್ ಸಂರಕ್ಷಣಾ ವಲಯದ ಕಲ್ಪನೆ ಮನೋಜಕುಮಾರ ಅವರದ್ದೇ ಕಲ್ಪನೆ. ನಾನು ಕೇವಲ ನಕ್ಷೆ ತಯಾರಿಸಿ, ಒಂದಿಷ್ಟು ಸಲಹೆ ಕೊಟ್ಟಿದ್ದೆನಷ್ಟೆ. ನಂತರ ವಿಜಯ ಕರ್ನಾಟಕದ ಸಂಪಾದಕರೂ ಈ ಬಗ್ಗೆ ಬರೆದ ಮೇಲೆ ಮತ್ತಷ್ಟು ವೇಗ ಪಡೆಯಿತು.

ಜಿಲ್ಲೆಯ ಬಹುಪಾಲು ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಇನ್ನೂ ಅಳಿದುಳಿದಿರುವ ಒಳ್ಳೆ ಅರಣ್ಯವನ್ನ ಸೇರಿಸಿ, ಬೇಡ್ತಿ ಮತ್ತು ಅಘಾಶಿನಿ ಸಂರಕ್ಷಣಾ ವಲಯಗಳ ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಬಹುಶಃ ಎಲ್ಲರಿಗೂ ನೆನಪಿರಬಹುದು.ಇತ್ತೀಚೆಗೆ ಹಣಕೋಣದಲ್ಲಿ ಉಷ್ಣಸ್ಥಾವರದ ಯೋಜನೆ ನಿಲ್ಲಲು ಪ್ರಮುಖ ಕಾರಣ, ಯೋಜನೆಯ ಪ್ರದೇಶ ಗೋವಾದ ಕೋಟಿಗಾಂವ ಅಭಯಾರಣ್ಯದಿಂದ ಹತ್ತು ಕಿ. ಮೀ. ಒಳಗೇ ಇದೆ ಎನ್ನುವುದು ಎಂದು. ಇಂತ ಸಂರಕ್ಷಣಾ ವಲಯದ ಸುತ್ತಲಿನ ಹತ್ತು ಕಿ. ಮೀ ಒಳಗೆ ಕೂಡ ಯಾವುದೇ ಭೃಹತ ಯೋಜನೆಗಳು ಬರುವ ಹಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಹೋರಾಟಕ್ಕೆ ಒಂದು ತಾತ್ವಿಕ ನೆಲೆ ಇದು. ಮೂವತ್ತು ವರ್ಷಗಳಿಂದ ಎಷ್ಟೊಂದು ಹಿರಿಯರು, ಈ ಹೋರಾಟದಲ್ಲಿ ಬಾಗವಹಿಸಿದ್ದರು. ನಮ್ಮೆಲ್ಲರಲ್ಲಿ ಪರಿಸರ ಕಾಳಜಿ ಹುಟ್ಟಲು ಅವರೆಲ್ಲರ ಕಾಳಜಿಯೇ ಕಾರಣ. ಆ ಎಲ್ಲ ಹಿರಿಯರಿಗೆ ಅಭಿನಂದನೆಗಳು.

***************************************************************

ಅಘನಾಶಿನಿ ಸಂರಕ್ಷಣಾ ವಲಯ:

ಅಘನಾಶಿನಿ ಕಣಿವೆಯ ಉಂಚಳ್ಳಿ ಜಲಪಾತದಿಂದ ಪ್ರಾರಂಭವಾದ ಅಘಾಶಿನಿ ಕಣಿವೆಯ ಎರಡೂ ಪಕ್ಕದ ಕಾಡು, ಗುಡ್ಡೆ ಕೋಟೆ, ನಿಲ್ಕುಂದ ದೇವಿಮನೆ, ವಾಟೆಹಳ್ಳ ಜಲಪಾತ, ಭೀಮನಗುಡ್ಡ, ನಿಶಾನೆ ಗುಡ್ಡ, ಬೆಣ್ಣೆಹೊಳೆ ಕಣಿವೆ, ಬೆಣ್ಣೆಹೊಳೆ ಜಲಪಾತ ಮೊರ್ಸೆ ಊರಿನ ಹಿಂಭಾಗ, ದೊಡ್ಮನೆ ಘಟ್ಟ, ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 96.344 ಚ.ಕಿ.ಮೀ.

ಬೇಡ್ತಿ ಸಂರಕ್ಷಣಾ ವಲಯ:

ಬೆಡ್ತಿ ನದಿ ಕಣಿವೆಯ ಮಾಗೋಡ ಜಲಪಾತದಿಂದ ಪ್ರಾರಂಭವಾಗಿ ಕಣಿವೆಯ ಎರಡೂ ಪಕ್ಕದ ಕಾಡು, ಜೇನು ಕಲ್ಲು ಗುಡ್ಡ ದಿಂದ ಕೆಳಾಸೆ ಗ್ರಾಮದವರೆಗೆ, ಶಹಿವಗಂಗಾ ಜಲಪಾತದಿಂದ, ಕೊಂಕಿ ಕೋಟೆ, ಬಿಳಿ ಹಳ್ಳ ಕಣಿವೆ ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 33.95 ಚ.ಕಿ.ಮೀ.

ಏನಿದು ಸಂರಕ್ಷಣಾ ವಲಯ?

ವನ್ಯ ಜೀವಿ ಸಂರಕ್ಷಣಾ ಕಾನೂನು, 1972, (2006ರ ಸೇರ್ಪಡೆ) 36 ಆ, ದಂತೆ ಘೋಶಿಸಲಾಗುವ, ಈ ಪ್ರದೇಶದ ಸಂರಕ್ಷಣೆಯನ್ನು ಅರಣ್ಯ ಇಲಾಖೆಯೋಮದಿಗೆ ಸ್ಥಳೀಯರನ್ನೂಳಗೊಂಡ ಸಮೀತಿಯು ನಿರ್ವಹಿಸುವುದು.

ಲಾಭಗಳು:
ಕೇವಲ 4 % ಅರಣ್ಯವನ್ನು ಸಂರಕ್ಷಣಾ ವಲಯ ಎಂದು ಘೋಶಿಸುವ ಮೂಲಕ ಜಿಲ್ಲೆಯ ಹೆಚ್ಚಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸಲು ಸಾಧ್ಯ.
ಅರಣ್ಯ ನಾಶವಾಗುವ ಬೃಹತ ಯೋಜನೆಗಳಿಗೆ ಕಡಿವಾಣ
ಜನಜೀವನಕ್ಕೆ ಯಾವುದೇ ಸಮಸ್ಯೆ ಇಲ್ಲ

ವನ್ಯ ಜೀವಿಗಳ ವಲಸೆ ಮಾರ್ಗ ಸುಸ್ಠಿರ

*********************************************************************

Sunday, October 17, 2010

ಮತ್ತೆ ಬಂದಿದ್ದೇನೆ!

ಮತ್ತೆ ಬಂದಿದ್ದೇನೆ, ಮೂರು ತಿಂಗಳ ನಂತರ . ಮೂರು ತಿಂಗಳು ಸುತ್ತಾಟದಲ್ಲೇ ಕಳೆದೆ.
ನಾಲ್ಕು ದೇಶಗಳನ್ನು ನೋಡಿದೆ.
ಇಟಲಿ ಮತ್ತು ಚೀನಾದಲ್ಲಿ ಒಂದೊಂದು ತಿಂಗಳು ಅಧ್ಯಯನದ ಅವಕಾಶ.
ಮಧ್ಯೆ ಒಂದು ತಿಂಗಳು ಊರಲ್ಲಿ.
ಇಟಲಿಯ ಆಲ್ಪ್ಸ ಪರ್ವತ, ಚೀನಾದ ಟಿಯಾನಮನ್ ಪರ್ವತ ಶ್ರೇಣಿಯಲ್ಲಿನ ಅಧ್ಯಯನ,
ಊರಲ್ಲಿ ಮೂರು ಹೊಸ ಸಂರಕ್ಷಣಾ ವಲಯದ ಘೋಷಣೆಗಾಗಿನ ಕೆಲಸ,
ಕೊನೆಗೆ ನಿನ್ನೆ ಬರುವಾಗ ವಿಮಾನ ತಡವಾಗಿ,
ದುಬೈಯಲ್ಲೇ ಒಂದು ದಿನದ ಸುತ್ತಾಟ, ......
ಹೀಗೆ ಏನೆಲ್ಲ ಘಟನೆಗಳು, ಎಷ್ಟೆಲ್ಲ ಹೊಸ ಬದಲಾವಣೆಗಳು?
ಕಳೆದ ಈ ಮೂರು ತಿಂಗಳಲ್ಲಿ 40 GB ಫೋಟೋಗಳು ಕಂಪ್ಯೂಟರನ್ನು ಹೊಕ್ಕು ಕುಳಿತಿವೆ.
ಎಲ್ಲಿಂದ ಶುರು ಮಾಡಲಿ, ನೆನಪಿನ ಸುರುಳಿಯ ಬಿಚ್ಚಲು ?

Friday, June 18, 2010

ವಸಂತ ಬರೆದ ಒಲವಿನ ಚಿತ್ತಾರ


ಕಳೆದ ಬಾರಿ ಇನ್ನೊಂದಿಷ್ಟು ಚಿತ್ರಗಳನ್ನು ಹಾಕುತ್ತೇನೆ ಎಂದು ಹೇಳಿದ್ದೆ. ಈ ಮಧ್ಯೆ ಊರಿಗೆ
ಹೋಗಿ ಬರಬೇಕಾಯಿತು. ತಿರುಗಿ ಬಂದಾಗ ಇಲ್ಲಿನ ಚಿತ್ರವೇ ಬೆರೆಯಾಗಿತ್ತು. ಹೋಗುವಾಗ ಇದ್ದ ಹೂವುಗಳ
ಜಾಗದಲ್ಲಿ ಬೇರೆಯದೇ ಬಣ್ಣದ ಹೂವುಗಳು ತಲೆ ಎತ್ತಿದ್ದವು. ಕೆಲವನ್ನು ಇಲ್ಲಿ
ಹಾಕುತ್ತಿದ್ದೇನೆ. ನೋಡಿ.

ಛಳಿಗಾಲ್ಲಿ ಎಲೆ ಉದುರಿಸಿದ ಸಸ್ಯಗಳಿಗೆ ಈಗ ಸಂಭ್ರಮದ ಕಾಲ. ಬೆಳಿಗ್ಗೆ ಐದಕ್ಕೆಲ್ಲ ಕಾಣಿಸುವ ಸೂರ್ಯ ಸಂಜೆ ಮುಳುಗುವುದು ಹತ್ತು ಘಂಟೆಯ ನಂತರ. ಧಾರಾಳ ಬಿಸಿಲು. ದಿನಕ್ಕೆ ಒಂದೂವರೆ ದಿನದ ಬೆಳವಣಿಗೆ. ಮತ್ತೆ ಛಳಿಗಾಲ ಬರುವುದರೊಳಗೆ ಜೀವನ ಚಕ್ರ ಮುಗಿಸಬೇಲ್ಲ! ಬದುಕಿನ ಹೋರಾಟದಲ್ಲಿ ಬದಲಾವಣೆಗಳಿ ಅನಿವಾರ್ಯ!.